ವೇದವಲ್ಲಿ, ಪದ್ಮಲತಾ, ಸೌಜನ್ಯ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಆಗ್ರಹ
ಸಾಂದರ್ಭಿಕ ಚಿತ್ರ (Photo: PTI)
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ ಮುಂತಾದ ಅಪಹರಣ, ಅತ್ಯಾಚಾರ, ಕೊಲೆ ಮತ್ತು ಅಸಹಜ ಸಾವುಗಳ ಕುರಿತು ಸಮಗ್ರ ತನಿಖೆ ಮಾಡಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸಿಪಿಎಂನ ಕಾರ್ಯದರ್ಶಿ ಡಾ.ಪ್ರಕಾಶ್, ಸಿಪಿಐನ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ-ಎಂಎಲ್‍ನ ರಾಜ್ಯ ಸಮಿತಿ ಸದಸ್ಯೆ ಲೇಖಾ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಿಪಿಐನ ಸಾತಿ ಸುಂದರೇಶ್, ಅನಾಮಿಕ ವ್ಯಕ್ತಿಯ ದೂರಿನ ಆಧಾರದಲ್ಲಿ ರಾಜ್ಯ ಸರಕಾರದ ತೀರ್ಮಾನದಂತೆ ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‍ಐಟಿ ತನಿಖೆ ನಡೆಯುತ್ತಿದೆ. ಎಸ್‍ಐಟಿ ಒತ್ತಡಗಳಿಗೆ ಮಣಿಯದೇ ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.
ತನಿಖೆಯು ವಿವಿಧ ಚರ್ಚೆಗಳನ್ನು ಹುಟ್ಟುಹಾಕಿದೆ. ಎಸ್‍ಐಟಿ ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲವಾದರೂ, ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದೆ. ಇದೇ ಸಂದರ್ಭದಲ್ಲಿ ಇಡೀ ತನಿಖೆಯ ಸ್ವರೂಪವನ್ನೇ ದಾರಿತಪ್ಪಿಸಲು ದೇವಸ್ಥಾನ, ದೇವರು, ನಂಬಿಕೆಯ ಪ್ರಶ್ನೆಗಳನ್ನು ಮುಂದು ಮಾಡಿ ದೇವರು ಧರ್ಮದ ಮೇಲಿನ ದಾಳಿ ನಡೆಯುತ್ತಿದೆ ಎಂದು ಜನರಲ್ಲಿ ಭಾವೋದ್ರೇಕವನ್ನು ಸೃಷ್ಟಿಸಲು ಬಿಜೆಪಿ ಮತ್ತು ಇತರೆ ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಸಾತಿ ಸುಂದರೇಶ್ ದೂರಿದರು.
ಸಿಪಿಎಂನ ಡಾ.ಪ್ರಕಾಶ್ ಮಾತನಾಡಿ, ಸರಕಾರವೇ ನೇಮಕ ಮಾಡಿರುವ ಎಸ್‍ಐಟಿ ತಂಡ ಮತ್ತು ಅವರ ತನಿಖೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸುವ ರೀತಿಯಲ್ಲಿ ಉಪ-ಮುಖ್ಯಮಂತ್ರಿ ಸದನದಲ್ಲಿ ಆಡಿರುವ ಮಾತುಗಳು ಗಾಬರಿ ಹುಟ್ಟಿಸುತ್ತವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಡಿದ ಮಾತುಗಳು ಸಹಜವಾಗಿಯೇ ತನಿಖೆಯ ಧಿಕ್ಕು ಏನಾಗಬಹುದು ಎಂದು ಬಹಿರಂಗವಾಗಿದೆ. ಸರಕಾರ ನೇಮಕ ಮಾಡಿರುವ ತನಿಖಾ ತಂಡವನ್ನು ಸರಕಾರದ ಪ್ರಮುಖ ಮಂತ್ರಿಗಳೇ ದುರ್ಬಲಗೊಳಿಸುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಎಸ್‍ಐಟಿ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಗಟ್ಟಿಯಾಗುತ್ತಾ ಸಾಗುತ್ತಿದ್ದಾಗ, ಜನರಲ್ಲಿ ಮೂಡಿದ ವಿಶ್ವಾಸದ ಕಾರಣದಿಂದ ಹಲವು ವ್ಯಕ್ತಿಗಳು ಸಾಕ್ಷಿಗಳಾಗಿ ಮುಂದೆ ಬರುತ್ತಿದ್ದಾರೆ. ಇನ್ನೂ ಹಲವು ಜನ ಮುಂದೆ ಬರುವ ಸಾಧ್ಯತೆ ಇದೆ. ಪ್ರಕರಣವನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕಾದ ಪರಿಸ್ಥಿತಿ ಬೆಳೆಯುತ್ತಿರುವಾಗ ಜನರೇ ಭಯ ಪಟ್ಟು ಹಿಂದೆ ಸರಿಯಬೇಕು ಎಂಬ ರೀತಿಯಲ್ಲಿ ಸರಕಾರದ ಮಂತ್ರಿಗಳು, ಬಿಜೆಪಿಯ ನಾಯಕರುಗಳು ಟೀಕೆಗಳನ್ನು ಮಾಡಿದ್ದಾರೆ ಎಂದರು.
ಸಿಪಿಐ-ಎಂಎಲ್‍ನ ಲೇಖಾ ಅಡವಿ ಮಾತನಾಡಿ, ಸರಕಾರದ ಮಂತ್ರಿಗಳು ಈ ನಿಲುವಿನಿಂದ ಹೊರಬರಬೇಕು ಮತ್ತು ಜನರಲ್ಲಿ ಕಳೆದು ಹೋಗಬಹುದಾದ ವಿಶ್ವಾಸವನ್ನು ಮರು ಸ್ಥಾಪಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಹಿಂದೆ ಸಮರ್ಪಕ ತನಿಖೆ ಮಾಡದೆ ಮುಚ್ಚಿ ಹಾಕಲಾಗಿರುವ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಕೊಲೆ ಪ್ರಕರಣಗಳನ್ನು, ತನ್ನ ವ್ಯಾಪ್ತಿಗೆ ತಂದುಕೊಂಡು ತನಿಖೆ ನಡೆಸಬೇಕು. ಸೌಜನ್ಯ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಹೇಳಿರುವಂತೆ ಮರು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.