×
Ad

ಆಡಳಿತ-ಪ್ರತಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ವೇದಿಕೆ ಸಜ್ಜು; ಆಗಸ್ಟ್ 11ರಿಂದ ವಿಧಾನ ಮಂಡಲ ಅಧಿವೇಶನ

Update: 2025-07-18 21:08 IST

File Photo

ಬೆಂಗಳೂರು: ರಾಜ್ಯ ವಿಧಾನ ಮಂಡಲ ಉಭಯ ಸದನಗಳ ಮಹತ್ವದ ‘ಮುಂಗಾರು ಅಧಿವೇಶನ’ವು ಆಗಸ್ಟ್ 11ರಿಂದ 22ರ ವರೆಗೆ ನಡೆಯಲಿದೆ.

ಶುಕ್ರವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ಸಂಬಂಧ ರಾಜ್ಯಪತ್ರವನ್ನು ಪ್ರಕಟಿಸಿದ್ದು, ಆಗಸ್ಟ್ 11ರ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಸಮಾವೇಶಗೊಳ್ಳಲಿದೆ ಎಂದು ಆದೇಶ ಹೊರಡಿಸಿದ್ದಾರೆ.

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಶನಿವಾರ ಮತ್ತು ರವಿವಾರ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು 9 ದಿನಗಳ ಕಾಲ ಅಧಿವೇಶನ ಕಲಾಪ ಜರುಗಲಿದ್ದು, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ, ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.

ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ, ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ, ಬಿಜೆಪಿ ಶಾಸಕರ ವಿರುದ್ಧ ಎಫ್‍ಐಆರ್, ಅಧಿಕಾರಿಯೊಬ್ಬರ ಮೇಲೆ ಸಿಎಂ ಕೈ ಎತ್ತಿದ ಪ್ರಕರಣ, ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಶಾಸಕರ ಸಭೆ, ಅಧಿಕಾರ ಹಂಚಿಕೆ ವಿಚಾರವು ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ.

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಟಾನದ ಉಮೇದಿನಲ್ಲಿರುವ ರಾಜ್ಯ ಸರಕಾರ ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಲು ಸನ್ನದ್ಧವಾಗಿದೆ. ಪರಿಷತ್ ಸದಸ್ಯ ರವಿಕುಮಾರ್ ರಿಂದ ಮುಖ್ಯ ಕಾರ್ಯದರ್ಶಿ, ಕಲಬುರಗಿ ಜಿಲ್ಲಾಧಿಕಾರಿ ವಿರುದ್ದ ಅವಹೇಳನಕಾರಿ ಪದಗಳ ಬಳಕೆ ಸಹಿತ ಇನ್ನಿತರ ಸಂಗತಿಗಳನ್ನು ಪ್ರಸ್ತಾಪಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜುಗೊಂಡಿದ್ದು, ಮುಂಗಾರು ಅಧಿವೇಶನ ತೀವ್ರ ಕುತೂಹಲ ಸೃಷ್ಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News