ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ.70.03ರಷ್ಟು ಮತದಾನ

Update: 2024-05-07 17:51 GMT

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ಎರಡನೆ ಹಂತದ ಚುನಾವಣೆಯಲ್ಲಿ ಕೆಲವೆಡೆ ಮತಯಂತ್ರಗಳ ದೋಷ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ, ವಾಗ್ವಾದಂತಹ ಘಟನೆಗಳ ನಡುವೆಯೂ ಒಟ್ಟಾರೆ ಶೇ.70.03ರಷ್ಟು ಅಂದಾಜು ಮತದಾನವಾಗಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.76.47ರಷ್ಟು ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.61.73 ರಷ್ಟು ಮತದಾನವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೆ ಮತದಾರರು ಉತ್ಸಾಹದಿಂದಲೆ ತಮ್ಮ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.

ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು ಮತದಾನಕ್ಕೂ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ತಮ್ಮ ಹಕ್ಕು ಚಲಾಯಿಸಲು ಆಗಮಿಸಿದ್ದರು. ಚುನಾವಣಾ ಆಯೋಗವು ಮತದಾರರ ಅನುಕೂಲಕ್ಕಾಗಿ ಮತಗಟ್ಟೆಗಳ ಬಳಿ ವಿಶ್ರಾಂತಿ ಕೊಠಡಿಗಳನ್ನು ಸಿದ್ಧಪಡಿಸಿತ್ತು. ಅಲ್ಲದೆ, ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು.

ಕೆಲವು ಮತಗಟ್ಟೆಗಳ ಬಳಿ ಮತದಾನ ಮಾಡಲು ಆಗಮಿಸುವ ಮತದಾರರಿಗೆ ಕುಡಿಯುಲು ಹಣ್ಣಿನ ರಸ, ತಂಪಾದ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆಲವು ಆಸ್ಪತ್ರೆಗಳು ಮತದಾನ ಮಾಡಿ ಬರುವವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದವು. ಅಲ್ಲದೆ, ಹೊಟೇಲ್‍ಗಳಲ್ಲಿ ಉಚಿತ ಟೀ, ಐಸ್ ಕ್ರೀಂಗಳನ್ನು ಮತದಾರರಿಗೆ ವಿತರಣೆ ಮಾಡಿದ್ದು ಕಂಡು ಬಂತು.

ಒಂದೂವರೆ ತಿಂಗಳಿನಿಂದ ಸರಣಿ ಪ್ರಚಾರ ಸಭೆಗಳು, ರ್ಯಾಲಿ, ರೋಡ್ ಶೋಗಳನ್ನು ನಡೆಸಿದ್ದ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 227 ಅಭ್ಯರ್ಥಿಗಳು ಇದೀಗ ನಿರಾಳರಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳ ಭವಿಷ್ಯವು ಮತಯಂತ್ರ ಸೇರಿದ್ದು, ಇನ್ನೂ ಎಲ್ಲರ ಕಣ್ಣು ಜೂ.4ರಂದು ಪ್ರಕಟವಾಗಲಿರುವ ಫಲಿತಾಂಶದ ಮೇಲೆ ನೆಟ್ಟಿದೆ.

ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ(ಹಾವೇರಿ), ಜಗದೀಶ್ ಶೆಟ್ಟರ್(ಬೆಳಗಾವಿ), ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ(ಧಾರವಾಡ), ಭಗವಂತ ಖೂಬಾ(ಬೀದರ್), ರಾಜ್ಯದ ಸಚಿವರ ಮಕ್ಕಳಾದ ಮೃಣಾಲ್ ಹೆಬ್ಬಾಳ್ಕರ್(ಬೆಳಗಾವಿ), ಪ್ರಿಯಾಂಕಾ ಜಾರಕಿಹೊಳಿ(ಚಿಕ್ಕೋಡಿ), ಸಂಯುಕ್ತಾ ಪಾಟೀಲ್ (ಬಾಗಲಕೋಟೆ), ಸಾಗರ್ ಖಂಡ್ರೆ(ಬೀದರ್), ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್(ದಾವಣಗೆರೆ), ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ(ಶಿವಮೊಗ್ಗ) ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ 206 ಪುರುಷರು ಹಾಗೂ 21 ಮಹಿಳೆಯರು ಸೇರಿ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 14 ಕ್ಷೇತ್ರಗಳಲ್ಲೆ ಅತೀ ಹೆಚ್ಚು ಅಭ್ಯರ್ಥಿಗಳು ದಾವಣಗೆರೆ(30)ಯಲ್ಲಿದ್ದರೆ, ಅತೀ ಕಡಿಮೆ ಅಭ್ಯರ್ಥಿಗಳು ಬಿಜಾಪುರ ಹಾಗೂ ರಾಯಚೂರು(8) ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಇನ್ನುಳಿದಂತೆ ಚಿಕ್ಕೋಡಿ-18, ಬೆಳಗಾವಿ-13, ಬಾಗಲಕೋಟೆ-22, ಗುಲ್ಬರ್ಗ-14, ಬೀದರ್-18, ಕೊಪ್ಪಳ-19, ಬಳ್ಳಾರಿ-10, ಹಾವೇರಿ-14, ಧಾರವಾಡ-17, ಉತ್ತರ ಕನ್ನಡ-13 ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ರಾಜ್ಯದಲ್ಲಿ ಎ.26ರಂದು ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.69ರಷ್ಟು ಮತದಾನವಾಗಿತ್ತು.

ಕ್ಷೇತ್ರವಾರು ಮತದಾನ ಪ್ರಮಾಣ

ಬಾಗಲಕೋಟೆ-ಶೇ.70.10

ಬೆಳಗಾವಿ-ಶೇ.71.00

ಬಳ್ಳಾರಿ-ಶೇ.72.35

ಬೀದರ್-ಶೇ.63.55

ಬಿಜಾಪುರ-ಶೇ.64.71

ಚಿಕ್ಕೋಡಿ-ಶೇ.76.47

ದಾವಣಗೆರೆ-ಶೇ.76.23

ಧಾರವಾಡ-ಶೇ.72.12

ಕಲಬುರಗಿ-ಶೇ.61.73

ಹಾವೇರಿ-ಶೇ.74.75

ಕೊಪ್ಪಳ-ಶೇ.69.87

ರಾಯಚೂರು-ಶೇ.61.81

ಶಿವಮೊಗ್ಗ-ಶೇ.76.05

ಉತ್ತರ ಕನ್ನಡ-ಶೇ.73.52

ಕಾಂಗ್ರೆಸ್ ಕಾಯಕರ್ತನ ಮೇಲೆ ಹಲ್ಲೆ: ಸವದತ್ತಿ ತಾಲೂಕಿನ ಭಂಡಾರಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 88ರ ಕಾಂಗ್ರೆಸ್ ಬೂತ್ ಏಜೆಂಟ್ ಹನುಮಂತ ಅರಂಭಾವಿ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ, ಸವದತ್ತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News