ಲೋಕಸಭಾ ಚುನಾವಣೆ: 14 ಗ್ಯಾರಂಟಿ ಸಮಾವೇಶ, 76 ಪ್ರಜಾಧ್ವನಿ ಜನ ಸಮಾವೇಶದೊಂದಿಗೆ ಭರ್ಜರಿ ಪ್ರಚಾರ ಮಾಡಿದ ಸಿದ್ದರಾಮಯ್ಯ

Update: 2024-05-10 06:06 GMT

Photo credit: X@siddaramaiah

ಬೆಂಗಳೂರು, ಮೇ 10: ಮುಖ್ಯಮಂತ್ರಿ ಸಿದ್ದರಾಮಯ್ಯ 2024ರ ಲೋಕಸಭಾ ಚುನಾವಣೆಯಲ್ಲಿ ರೋಡ್ ಶೋ/ಸಮಾವೇಶಗಳನ್ನು ನಡೆಸುವ ಮೂಲಕ ಭರ್ಜರಿಯಾಗಿ ಚುನಾವಣೆ ಪ್ರಚಾರ ಮಾಡಿದ್ದಾರೆ. ಚುನಾವಣೆ ಆರಂಭಕ್ಕೂ ಮುನ್ನ ರಾಜ್ಯ ಸರಕಾರದ ಜನಪ್ರಿಯ ಕಾರ್ಯಕ್ರಮಗಳಾದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಸಮಾವೇಶಗಳನ್ನು ಆಯೋಜಿಸಿದ್ದರೆ, ಚುನಾವಣೆ ಘೋಷಣೆಯಾದ ಬಳಿಕ ಪ್ರಜಾಧ್ವನಿ ಜನ ಸಮಾವೇಶಗಳ ಮೂಲಕ ರಾಜ್ಯಾದ್ಯಂತ ಅವರು ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ನೇತೃತ್ವ ವಹಿಸಿದ್ದರು.

ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತೀ ದಿನ ರಸ್ತೆ ಮಾರ್ಗ/ವಾಯು ಮಾರ್ಗ ಸೇರಿ ಸರಾಸರಿ 14ರಿಂದ 18 ಗಂಟೆ ಶ್ರಮಿಸಿದ್ದಾರೆ ಎಂದು ಸರಕಾರದ ಮೂಲಗಳಿಂದ ಮಾಹಿತಿ ಲಭಿಸಿದೆ.

ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲೇ 14 ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸಲಾಗಿತ್ತು. ಜನವರಿ 12ರಂದು ಶಿವಮೊಗ್ಗದಲ್ಲಿ ಮೊದಲ ಗ್ಯಾರಂಟಿ ಸಮಾವೇಶ ಆಯೋಜಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾರ್ಚ್ 15ರಂದು ಮೈಸೂರಿನಲ್ಲಿ 14ನೇ ಗ್ಯಾರಂಟಿ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಪ್ರಚಾರ ನಡೆಸಿದ್ದಾರೆ. ಎಲ್ಲಾ ಸಮಾವೇಶಗಳಲ್ಲೂ ಸರಕಾರದ ಗ್ಯಾರಂಟಿ ಯೋಜನೆಗಳ ತಾತ್ವಿಕತೆ, ಅಗತ್ಯ, ಅನಿವಾರ್ಯತೆ ಮತ್ತು ಪರಿಣಾಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. ಸಮಾವೇಶಗಳಲ್ಲಿ ನೆರೆದಿದ್ದ ಜನರ ಜೊತೆ ಸಂವಾದ ನಡೆಸುತ್ತಲೇ ಅವರನ್ನು ಒಳಗೊಳ್ಳುತ್ತಾ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ 'ಪ್ರಜಾಧ್ವನಿ-2' ಜನ ಸಮಾವೇಶಗಳನ್ನು ಆಯೋಜಿಸಿದ್ದಾರೆ. ಈ ಸಮಾವೇಶಗಳಲ್ಲಿ ಪ್ರಭಾವಿ ಭಾಷಣಗಳ ಮೂಲಕ ರಾಜ್ಯದ ಜನತೆಗೆ 2024ರ ಲೋಕಸಭಾ ಚುನಾವಣೆಯ ಮಹತ್ವವನ್ನು ಮನಮುಟ್ಟುವಂತೆ ಅರ್ಥ ಮಾಡಿಸಲು ಶ್ರಮಿಸಿದ್ದಾರೆ.

''ಬಿಜೆಪಿ ಕೇವಲ ಭಾರತೀಯರ ಭಾವನೆಗಳನ್ನು ಕೆರಳಿಸಿ ಬಕ್ರಾ ಮಾಡುತ್ತಿದೆ. ಕಾಂಗ್ರೆಸ್ ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಭರವಸೆಗಳನ್ನು ನೀಡುತ್ತಿದೆ'' ಎಂದು ಜನ ಸಮಾವೇಶಗಳಲ್ಲಿ ಮುಖ್ಯಮಂತ್ರಿ ವಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಪ್ರಜಾಧ್ವನಿ ಜನ-ಸಮಾವೇಶದ ಇತರ ಹೈಲೈಟ್ಸ್ ಗಳು

1) 14 ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ 90 ಸಭೆಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಉದ್ದಗಲಕ್ಕೂ ಅಂದಾಜು 20ರಿಂದ 26 ಸಾವಿರ ಕಿಲೋಮೀಟರ್ (ಮುಖ್ಯಮಂತ್ರಿಗಳ ಮಾಧ್ಯಮ ತಂಡದ ಎರಡು ವಾಹನಗಳು ಪ್ರಯಾಣಿಸಿದ ಕಿಲೋಮೀಟರ್ ಆಧಾರದಲ್ಲಿ) ಪ್ರಯಾಣಿಸಿದ್ದಾರೆ.

2) ಈ 90 ಸಭೆಗಳು/ರೋಡ್ ಶೋಗಳಲ್ಲಿ 7 ಸಾವಿರದಿಂದ 60 ಸಾವಿರದವರೆಗೂ ಜನರು ಸೇರಿದ್ದರು.

3) ರೋಡ್ ಶೋ/ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಮಾಣ ಸರಾಸರಿ 15 ಸಾವಿರ ಎಂದು ಲೆಕ್ಕ ಹಿಡಿದರೂ ಒಟ್ಟಾರೆ 14 ಲಕ್ಷದಷ್ಟು ಜನರನ್ನು ಮುಖ್ಯಮಂತ್ರಿ ನೇರಾನೇರಾ ತಮ್ಮ ಮಾತುಗಳಲ್ಲಿ ಬೆಸೆದಿದ್ದಾರೆ.

4) ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ನೆತ್ತಿ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನದ ವೇಳೆಯಲ್ಲೂ ತಲೆಗೆ ಟವೆಲ್ ಸುತ್ತಿದ ಗಂಡಸರು, ಸೆರಗು ತಲೆಗೆ ಸುತ್ತಿಕೊಂಡ ಮಹಿಳೆಯರು ಸಮಾವೇಶಗಳಲ್ಲಿ ಭಾಗಿಯಾಗಿದ್ದರು.

5) 'ಇಲ್ಲಿ ನಾನೇ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾನು ಗೆದ್ದಂತೆ' ಎಂದು ಸಿದ್ದರಾಮಯ್ಯ ಜನಮನ ಸೆಳೆಯುವ ಪ್ರಯತ್ನ ಮಾಡಿದರು.

6) ಕಳೆದ ಹತ್ತು ವರ್ಷಗಳ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ದೇಶದ ಆರ್ಥಿಕತೆ ಕುಸಿದಿದೆ ಎಂದು ಸಿದ್ದರಾಮಯ್ಯ ಬೊಟ್ಟು ಮಾಡಿದರು.

7) ತಮ್ಮ ಅಧಿಕಾರಾವಧಿಯಲ್ಲಿ ಕೊಟ್ಟ 18-20 'ಭಾಗ್ಯ' ಯೋಜನೆಗಳನ್ನು ಒಂದೊಂದಾಗಿ ಹೆಸರಿಸುತ್ತಾ... ಅವುಗಳನ್ನು ಕೊಟ್ಟಿದ್ದು ಯಾರು? ಎಂದು ಕೇಳಿದರೆ ಜನತೆ 'ಸಿದ್ದರಾಮಯ್ಯ' ಎಂದು ಕೂಗುತ್ತಿದ್ದರು.

8) ಸುಡು ಬಿಸಿಲಿನಲ್ಲೇ 74 ಪ್ರಜಾಧ್ವನಿ ಜನ ಸಮಾವೇಶಗಳು ನಡೆದರೆ, ಹಾವೇರಿ ಮತ್ತು ದಾವಣಗೆರೆ ಜನ ಸಮಾವೇಶಗಳಲ್ಲಿ ಮಾತ್ರ ತುಂತುರು ಹನಿ ಮಳೆಯಾಗಿತ್ತು. ಈ ರೀತಿ ಮೇ 5ರಂದು ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಸಿದ್ದರಾಮಯ್ಯ ತೆರೆ ಎಳೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News