×
Ad

ರಾಜ್ಯದ 7 ಮಂದಿ ಸರಕಾರಿ ಅಧಿಕಾರಿಗಳ ಕಚೇರಿ-ಮನೆ ಮೇಲೆ ಲೋಕಾಯುಕ್ತ ದಾಳಿ; ಪರಿಶೀಲನೆ

Update: 2025-05-31 12:22 IST

ಸಾಂದರ್ಭಿಕ ಚಿತ್ರ 

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ ಆರೋಪದಡಿ ಏಳು ಮಂದಿ ಅಧಿಕಾರಿಗಳಿಗೆ ಸೇರಿದ ರಾಜ್ಯದ 35ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ.

ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಉಡುಪಿ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವಿವಿಧ ಇಲಾಖೆಯ ಏಳು ಸರಕಾರಿ ಅಧಿಕಾರಿಗಳ ಕಚೇರಿಗಳು ಹಾಗೂ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ಶನಿವಾರ ದಾಳಿ ಮಾಡಿ ಕೋಟ್ಯಂತರ ರೂ. ನಗದು, ಆಸ್ತಿ ಹಾಗೂ ಚಿನ್ನಾಭರಣವನ್ನು ವಶಕ್ಕೆ ಪತ್ತೆ ಹಚ್ಚಿರುವುದಾಗಿ ತಿಳಿದುಬಂದಿದೆ.

ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಲ್ಲಿನ ದೇವರಾಜ್ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ಧಲಿಂಗಪ್ಪ ಬಾನಸಿ ಅವರ ಬೆಳಗಾವಿಯ ವಿದ್ಯಾನಗರದಲ್ಲಿರುವ ಮನೆ, ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ ಪಂಚಾಯಿತಿ ಅಧಿಕಾರಿ ರಾಮಕೃಷ್ಣಪ್ಪ ಗುಡಗೇರಿ ಅವರ ಕಚೇರಿ ಹಾಗೂ ಅವರಿಗೆ ಸಂಬಂಧಿಸಿದ ಧಾರವಾಡ ಹಾಗೂ ದಾವಣಗೆರೆಯ ಕೆಲವೆಡೆಯೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗದಗ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರ ಕಚೇರಿ ಹಾಗೂ ನಿವಾಸದ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ಗಂಗಾಧರ ಶಿರೋಳ ಅವರ ಅಳಿಯ ವಿಜಯ ಯಳಮೇಲಿ ಮತ್ತು ಭಾವ ನಾಗರಾಜ್ ಅಕ್ಕಿಯವರ ನಿವಾಸಗಳ ಮೇಲೆಯೂ ದಾಳಿ ನಡೆದಿದೆ.

ಅಲ್ಲದೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಎಸ್.ಎಸ್.ಶೆಟ್ಟರ್ ಹಾಗೂ ಹಾವೇರಿ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗಳಲ್ಲೂ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ಧಾರವಾಡದ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಎಚ್.ಸುರೇಶ್ ಅವರ ಮನೆ, ಕೆಸಿಡಿ ವೃತ್ತದ ಬಳಿ ಇರುವ ಸರಕಾರಿ ನಿವಾಸ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಳ್ಳಾರಿಯ ಪಿಡಬ್ಲ್ಯೂಡಿ ಸೆಕ್ಷನ್ ಇಂಜಿನಿಯರ್ ಅಮೀನ್ ಮುಕ್ತಾರ್ ಅಹಮದ್ ಅವರ ಕಚೇರಿ ಹಾಗೂ ಕಲಬುರಗಿಯ ಹುಸೇನಿ ಗಾರ್ಡನ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲದೆ, ಇಂಜಿನಿಯರ್‍ಗೆ ಸಂಬಂಧಿಸಿದಂತೆ ಬಸವಕಲ್ಯಾಣದಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಕೌಂಟೆಂಟ್ ಶ್ರೀಶೈಲ್ ತತ್ರಾಣಿ ಎಂಬವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ತತ್ರಾಣಿ ಅವರಿಗೆ ಸೇರಿದ ಹುನಗುಂದ ತಾಲೂಕಿನ ಅಮೀನಗಡದಲ್ಲಿರುವ ಮೂರು ಮನೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯ ಕಾರ್ಕಳದ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್(ಬೆಸ್ಕಾಂ) ಅಕೌಂಟೆಂಟ್ ಗಿರೀಶ್ ರಾವ್ ಅವರ ಮನೆ ಹಾಗೂ ಕಚೇರಿ ಮೇಲೆಯೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಕೋಟ್ಯಂತರ ರೂ. ನಗದು, ಆಸ್ತಿ ಹಾಗೂ ಚಿನ್ನಾಭರಣಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News