‘ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ’ ಪರಿಷತ್‍ನಲ್ಲಿ ಗಂಭೀರ ಚರ್ಚೆ
ಶೌಚಾಲಯಗಳ ನಿರ್ವಹಣೆಗೆ ಅಗತ್ಯ ಕ್ರಮ : ಮಧು ಬಂಗಾರಪ್ಪ
ಬೆಂಗಳೂರು : ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ಕೆಲವು ಪ್ರಕರಣಗಳ ಕುರಿತಂತೆ ಮೇಲ್ಮನೆಯಲ್ಲಿ ಕೆಲಕಾಲ ಗಂಭೀರವಾದ ಚರ್ಚೆ ನಡೆಯಿತು.
ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರಾದ ರಾಮೋಜಿ ರಾವ್ ಹಾಗೂ ಮಧು ಜಿ.ಮಾದೇಗೌಡ ಸಹಿತ ಹಲವರು ಈ ಬಗ್ಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಬಾರದೆಂದು ಶಿಕ್ಷಕರಿಗೆ ಸ್ಪಷ್ಟವಾದ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿಯೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಶಾಲೆಗಳಿಗೆ ನಿಗದಿಪಡಿಸಿದ ಒಟ್ಟು ಶೇ.10ರಷ್ಟು ಅನುದಾನವನ್ನು ಶೌಚಾಲಯ ಸ್ವಚ್ಛತೆ ಮಾಡುವ ಸಿಬ್ಬಂದಿಗೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಸರಕಾರಿ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅನುದಾನವನ್ನು ಹೆಚ್ಚಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸ್ವಚ್ಛತಾಗಾರರ ಹುದ್ದೆಗಳು ಮಂಜೂರಾಗಿರುವುದಿಲ್ಲ. ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆಗಾಗಿ ಅನುದಾನ ಮಂಜೂರಾಗುತ್ತಿದ್ದು, ಸದರಿ ಅನುದಾನದಲ್ಲಿ ಸ್ವಚ್ಛತೆಗಾಗಿ ಸಿಬ್ಬಂದಿಗಳನ್ನು ಸ್ಥಳೀಯವಾಗಿ ಶಾಲಾ ಮೇಲುಸ್ತುವಾರಿ ಸಮಿತಿ ವತಿಯಿಂದ ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಕೆಲವು ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೌಚಾಲಯ ಮತ್ತು ಸ್ವಚ್ಛತೆಯ ಕೆಲಸವನ್ನು ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸಲು ಖಾಯಂ ಗ್ರೂಪ್-ಡಿಗಳನ್ನು ನೇಮಿಸಲಾಗಿದೆ. ಖಾಯಂ ಗ್ರೂಪ್-ಡಿ ಗಳಿಲ್ಲದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೌಚಾಲಯ ಮತ್ತು ಸ್ವಚ್ಛತೆಯ ಕೆಲಸವನ್ನು ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸಲು ಕಾಲೇಜು ಅಭಿವೃದ್ಧಿ ಸಮಿತಿಯ ವತಿಯಿಂದ ಗೌರವಧನ ಆಧಾರದ ಮೇಲೆ ಗ್ರೂಪ್-ಡಿ ಸಿಬ್ಬಂದಿಯ ಸೇವೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.