ಉರ್ದು ಶಿಕ್ಷಕರ ನೇಮಕ ವಿಚಾರ ಸಂಪುಟದಲ್ಲಿ ತೀರ್ಮಾನ : ಮಧು ಬಂಗಾರಪ್ಪ ಭರವಸೆ
ಬೆಂಗಳೂರು, ಸೆ.9 : ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಉರ್ದು ಶಿಕ್ಷಕರ ನೇಮಕಾತಿ ಸಂಬಂಧ ಎದುರಾಗಿರುವ ಸಮಸ್ಯೆ ನೀಗಿಸಿ ಅರ್ಹತೆ ಪಡೆದು ನೇಮಕಾತಿಗೆ ಕಾಯುತ್ತಿರುವ 67 ಅಭ್ಯರ್ಥಿಗಳ ತಕ್ಷಣ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
755 ಉರ್ದು ಶಿಕ್ಷಕರ ಹುದ್ದೆಗೆ 2021-22ರಲ್ಲಿ ಆಯ್ಕೆ ಪ್ರಕ್ರಿಯೆ ನಡೆದು, ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಹಿಂದುಳಿದ ವರ್ಗದ ಅಭ್ಯರ್ಥಿಗಳು ಇಲ್ಲದ ಕಾರಣ ಟಿ ಇ ಟಿ, ಸಿ ಇ ಟಿ ಪರೀಕ್ಷೆ ಬರೆದು ಉರ್ದು ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆದ ಉರ್ದು ಕಳಿತ ಅಭ್ಯರ್ಥಿಗಳನ್ನು ಪರಿಗಣಿಸಲು ಮನವಿ ಮಾಡಲಾಗಿತ್ತು.
ಇದಕ್ಕೆ ಕಾನೂನು ಇಲಾಖೆ, ಹಣಕಾಸು ಇಲಾಖೆ ಒಪ್ಪಿಗೆ ನೀಡಿತ್ತು. ಆದರೆ ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿತ್ತು. ಹೀಗಾಗಿ ಅಭ್ಯರ್ಥಿಗಳು ಸಚಿವ ಝಮೀರ್ ಅಹ್ಮದ್ ಖಾನ್ ಹಾಗೂ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಚಿವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.