×
Ad

ರಾಜ್ಯದ ಪೂರಕ ಅಂದಾಜು ಮಂಡನೆ: ಯಾವುದಕ್ಕೆ ಎಷ್ಟು ಖರ್ಚು? ; ಇಲ್ಲಿದೆ ಮಾಹಿತಿ..

Update: 2025-08-20 20:13 IST

ಸಚಿವ ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು: 2025-26ನೆ ಸಾಲಿನ 3,352.57 ಕೋಟಿ ರೂ.ಮೊತ್ತದ ರಾಜ್ಯದ ಪೂರಕ ಅಂದಾಜು (ಮೊದಲನೆ ಕಂತು) ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.

ಬುಧವಾರ ವಿಧಾನಸಭೆಯ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪೂರಕ ಅಂದಾಜನ್ನು ಮಂಡಿಸಿದರು. ಒಟ್ಟಾರೆ, 2025-26ನೆ ಸಾಲಿನ ಮೊದಲನೇ ಕಂತಿನ ಪೂರಕ ಅಂದಾಜು ಮೊತ್ತ 3,352.57 ಕೋಟಿ ರೂ. ಎಂದು ಉಲ್ಲೇಖಿಸಲಾಗಿದೆ.

ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು 3,352.57 ಕೋಟಿ ರೂಪಾಯಿಯಲ್ಲಿ 0.60 ಕೋಟಿ ರೂಪಾಯಿ ಪ್ರಭೃತ ವೆಚ್ಚ ಮತ್ತು 3,351.97 ಕೋಟಿ ರೂಪಾಯಿ ಪುರಸ್ಕೃತ ವೆಚ್ಚ ಸೇರಿದೆ. ಇದರಲ್ಲಿ ಮೀಸಲು ನಿಧಿಯಿಂದ ಭರಿಸಲಾಗುವ 262.20 ಕೋಟಿ ರೂಪಾಯಿ ಸಹ ಪುರಸ್ಕೃತವಾಗಿದೆ. ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 3,090.37 ಕೋಟಿ ರೂಪಾಯಿ ಆಗಿದೆ. ಇದರಲ್ಲಿ 820.70 ಕೋಟಿ ರೂಪಾಯಿ ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದ್ದರಿಂದ ಹೊರಹೋಗುವ ನಿವ್ವಳ ನಗದು 2,269.66 ಕೋಟಿ ರೂಪಾಯಿ ಆಗಿದೆ.

ರಾಜ್ಯ ಸರಕಾರವು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂಪಾಯಿ ವೆಚ್ಚ, ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ವೈದ್ಯಕೀಯ ವೆಚ್ಚದ ಬಿಲ್‍ಗಳನ್ನು ಮರು ಪಾವತಿಸಲು 21 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಪೂರಕ ಅಂದಾಜಿನಲ್ಲಿ ತಿಳಿಸಲಾಗಿದೆ.

ಅದೇ ರೀತಿ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಜರುಗಿದ ಸಚಿವ ಸಂಪುಟಕ್ಕೆ 3.69 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯದ ಎಲ್ಲ ನೋಂದಣಿ ಮತ್ತು ಮುದ್ರಾಂಕ ಕಚೇರಿಗಳಿಗೆ ಐಟಿ ಉಪಕರಣಗಳ ಪೂರೈಕೆ, ಅಳವಡಿಕೆ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಅಗತ್ಯ ಇರುವ ಮಾನವ ಸಂಪನ್ಮೂಲ ವೆಚ್ಚಗಳ ಪಾವತಿಯನ್ನು ಪಾವತಿಸಲು 50 ಕೋಟಿ ರೂಪಾಯಿ ನೀಡಲಾಗಿದೆ ಎಂದು ತಿಳಿಸಲಾಗಿದೆ.

ರಾಜ್ಯದಿಂದ ಉತ್ತರಾಖಂಡಕ್ಕೆ ತೆರಳಿದ ವೇಳೆ ಪ್ರಕೃತಿ ವೈಪರೀತ್ಯದಿಂದ ಮೃತ ಪಟ್ಟವರ ದೇಹಗಳನ್ನು ಮತ್ತು ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿತ್ತು. ನೆರವಿಗಾಗಿ ರಾಜ್ಯದಿಂದ ನಿಯೋಜಿಸಲಾದ ಅಧಿಕಾರಿಗಳ ವೆಚ್ಚಕ್ಕಾಗಿ 56.64 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 10 ಕೋಟಿ ರೂಪಾಯಿ ಸೇರಿದಂತೆ ಒಟ್ಟಾರೆಯಾಗಿ 10.56 ಕೋಟಿ ರೂಪಾಯಿ ಎಸ್‍ಡಿಆರ್‍ಎಫ್‍ನಲ್ಲಿ ರಾಜ್ಯದ ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ 2019-2023ರ ವರೆಗಿನ ಮನೆಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಪರಿಹಾರ ಮೊತ್ತವನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಬಿಡುಗಡೆ ಮಾಡಲು 42 ಕೋಟಿ ರೂಪಾಯಿ ಎಸ್‍ಡಿಆರ್‍ಎಫ್ ಅಡಿಯಲ್ಲಿ ನೀಡಲಾಗಿದೆ.

ಶಾಸಕರ ವಾಹನ ಖರೀದಿಗೆ 3.20 ಕೋಟಿ ರೂ. ವೆಚ್ಚ: ವಿಧಾನಸಭಾ ಸದಸ್ಯರ ವಾಹನ ಖರೀದಿಗಾಗಿ 3.20 ಕೋಟಿ ರೂ. ವೆಚ್ಚ ಮಾಡಲಾಗಿದೆ. ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಉಪಯೋಗಕ್ಕೆ ಹೊಸ ವಾಹನ ಖರೀದಿಗೆ 30 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಪ್ರತಿಪಕ್ಷದ ಮುಖ್ಯ ಸಚೇತಕರ ಉಪಯೋಗಕ್ಕಾಗಿ ಹೊಸ ವಾಹನವನ್ನು ಖರೀದಿಸಲು 31 ಲಕ್ಷ ರೂಪಾಯಿ ಒದಗಿಸಲಾಗಿದೆ.

ವಿಧಾನಪರಿಷತ್ ಸಚಿವಾಲಯದ ಅಧಿಕಾರಿ, ಸಿಬ್ಬಂದಿಗೆ ಪ್ರಯಾಣ ವೆಚ್ಚವನ್ನು ಪಾವತಿಸಲು 1.31 ಕೋಟಿ ರೂ. ನೀಡಲಾಗಿದೆ. ಬೆಂಗಳೂರಲ್ಲಿ ನಡೆಯುವ 11ನೆ ಕಾಮನ್ ವೆಲ್ತ್ ಸಂಸದೀಯ ಸಂಘದ ಭಾರತ ವಿಭಾಗದ ಸಮ್ಮೇಳನದ ವೆಚ್ಚಗಳಿಗಾಗಿ 10 ಕೋಟಿ ರೂ. ನೀಡಲಾಗಿದೆ.

ಕಳೆದ ಬೆಳಗಾವಿ ಅಧಿವೇಶನ ನಡೆಸಿರುವುದಕ್ಕೆ 1.72 ಕೋಟಿ ರೂ. ವೆಚ್ಚ ಮಾಡಲಾಗಿದೆ. 5ನೆ ರಾಜ್ಯ ಹಣಕಾಸು ಆಯೋಗದ ಕಚೇರಿ ನಿರ್ವಹಣೆಗಾಗಿ 2.30 ಕೋಟಿ ರೂ. ಅನುದಾನ ಒದಗಿಸಲಾಗಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧೀನದಲ್ಲಿರುವ ಮಾಧ್ಯಮ ಕೋಶದ ಹೊರಗುತ್ತಿಗೆ ಸಿಬ್ಬಂದಿ ವೇತನ ಪಾವತಿಗಾಗಿ 32.90 ಲಕ್ಷ ರೂ. ನೀಡಲಾಗಿದೆ. ಕುಮಾರಕೃಪಾ ಅತಿಥಿ ಗೃಹದ ದುರಸ್ತಿ ಕಾಮಗಾರಿಗಳ ವೆಚ್ಚಕ್ಕಾಗಿ 9.95 ಲಕ್ಷ ರೂ. ಒದಗಿಸಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News