ಜಿಬಿಎ | ಶೀಘ್ರವೇ ವಾರ್ಡ್‍ವಾರು ಕ್ಷೇತ್ರ ಪುನರ್ ವಿಂಗಡನೆಯ ಅಂತಿಮ ಅಧಿಸೂಚನೆ ಪ್ರಕಟ : ಮಹೇಶ್ವರ್ ರಾವ್
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಐದು ನಗರ ಪಾಲಿಕೆಗಳನ್ನು 368 ವಾರ್ಡ್‍ಗಳಾಗಿ ವಿಂಗಡನೆ ಮಾಡಿದ ಕರಡು ಅಧಿಸೂಚನೆಯನ್ನು ಈಗಾಗಲೇ ಪ್ರಕಟಗೊಂಡಿದ್ದು, ಅಧಿಸೂಚನೆಗೆ ಬಂದ ಆಕ್ಷೇಪಣೆ, ಸಲಹೆಗಳನ್ನು ಪರಿಶೀಲಿಸಿ, ಶೀಘ್ರದಲ್ಲೇ ವಾರ್ಡ್‍ವಾರು ಕ್ಷೇತ್ರ ಪುನರ್ ವಿಂಗಡನೆಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ಜಿಬಿಎನ ಮುಖ್ಯ ಆಯುಕ್ತ ಮಹೇಶ್ವರರಾವ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೇಂದ್ರ ನಗರ ಪಾಲಿಕೆಯಲ್ಲಿ 63, ದಕ್ಷಿಣ ನಗರ ಪಾಲಿಕೆಯಲ್ಲಿ 72, ಪೂರ್ವ ನಗರ ಪಾಲಿಕೆಯಲ್ಲಿ 50, ಪಶ್ಚಿಮ ನಗರ ಪಾಲಿಕೆಯಲ್ಲಿ 111, ಉತ್ತರ ನಗರ ಪಾಲಿಕೆಯಲ್ಲಿ 72 ಸೇರಿ ಒಟ್ಟು 368 ವಾರ್ಡ್‍ಗಳು ಜಿಬಿಎ ವ್ಯಾಪ್ತಿಗೆ ಬರಲಿವೆ ಎಂದು ಅವರು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇ-ಖಾತಾ ಮಾಡಿಕೊಳ್ಳಲು 7,96,780 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 7,83,179 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. 1,169 ಆಸ್ತಿಗಳನ್ನು ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು ಸ್ಮಾರ್ಟ್ ಇನ್ನಾಸ್ಟಕ್ಚರ್ಸ್ ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ಪ್ರಮುಖ ಯೋಜನೆಗಳಾದ ನಗರ ವಾಹನ ಸುರಂಗ ಮಾರ್ಗಗಳು, ಎತ್ತರಿಸಿದ ಕಾರಿಡಾರ್‍ಗಳು/ಗ್ರೇಡ್ ಸೆಪರೇಟರ್‍ಗಳ ನಿರ್ಮಾಣ, ಸಂಯೋಜಿತ ಮೆಟ್ರೋ ಮತ್ತು ರಸ್ತೆ ಮೇಲ್ವೇತುವೆಗಳ ನಿರ್ಮಾಣ, ನೆರೆಹೊರೆಯ ಉತ್ತಮ ಸಂಪರ್ಕಕ್ಕಾಗಿ ಮಳೆ ನೀರು ಚರಂಡಿಗಳ ಪಕ್ಕದಲ್ಲಿ ಲಿಂಕ್ ರಸ್ತೆಗಳ ರಚನೆ ಮತ್ತು ನಿರ್ಮಾಣ, ರಸ್ತೆಗಳ ವೈಟ್ ಟಾಪಿಂಗ್ ಮತ್ತು ರಸ್ತೆ ಅಗಲೀಕರಣ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
45 ಸಾವಿರ ಕೋಟಿ ರೂ.ಗಳ ಮೊತ್ತದಲ್ಲಿ ಎರಡು ವಾಹನ ಸುರಂಗ ಮಾರ್ಗಗಳ ನಿರ್ಮಾಣ ಮಾಡಲಾಗುತ್ತಿದ್ದು, ಉತ್ತರ-ದಕ್ಷಿಣ ಮಾರ್ಗದ 16.70 ಕಿ.ಮೀ ಉದ್ದದ ನಗರ ವಾಹನ ಸುರಂಗ ಮಾರ್ಗದ ಟೆಂಡರ್ ಚಾಲ್ತಿಯಲ್ಲಿರುತ್ತದೆ. ಪೂರ್ವ-ಪಶ್ಚಿಮ ಮಾರ್ಗದ 20 ಕಿ.ಮೀ ಉದ್ದದ ವಾಹನ ಸುರಂಗ ಮಾರ್ಗಕ್ಕೆ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ಅವರು ಹೇಳಿದರು.
18,204 ಕೋಟಿ ರೂ.ಗಳ ಮೊತ್ತದಲ್ಲಿ 126.44 ಕಿ.ಮೀ ಉದ್ದದ 13 ಎತ್ತರಿಸಿದ ಕಾರಿಡಾರ್‍ಗಳನ್ನು ಅನುಷ್ಠಾನಗೊಳಿಸಲು ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ. 9 ಸಾವಿರ ಕೋಟಿ ರೂ.ಗಳ ಮೊತ್ತದಲ್ಲಿ 40 ಕಿ.ಮೀ ಉದ್ದದ ಮೆಟ್ರೋ ಸಂಯೋಜಿತ ಡಬ್ಬಲ್ ಡೆಕ್ಕರ್ ಮೇಲ್ವೇತುವೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಪ್ರಸ್ತುತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
3000 ಕೋಟಿ ರೂ.ಗಳ ಮೊತ್ತದಲ್ಲಿ ರಾಜಕಾಲುವೆಗಳ ಪಕ್ಕದಲ್ಲಿ ಸುಮಾರು 380 ಕಿ.ಮೀ ಉದ್ದ ಬಫರ್ ರಸ್ತೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಪ್ರಸ್ತುತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ. 1700 ಕೋಟಿ ರೂ.ಗಳ ಮೊತ್ತದಲ್ಲಿ 145.86 ಕಿ.ಮೀ ಉದ್ದದ ರಸ್ತೆಗಳಲ್ಲಿ ಎಲ್ಲ ಉಪಯುಕ್ತತೆಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ವೈಟ್ ಟಾಪಿಂಗ್ ಅಳವಡಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಐ.ಟಿ ಕಾರಿಡಾರ್ ಆದ ಹೊರವರ್ತುಲ ರಸ್ತೆ(ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್. ಪುರಂವರೆಗೆ ಪಾಲಿಕೆಗಳು, ಮೆಟ್ರೋ, ಜಲಮಂಡಳಿ, ಕೆ.ಪಿ.ಟಿ.ಸಿ.ಎಲ್ ಮತ್ತು ಇತರೆ ಇಲಾಖೆಗಳ ಸಮಸ್ಯೆ ಇದ್ದು, 20.50 ಕಿ.ಮೀ ಉದ್ದದ ರಸ್ತೆಯನ್ನು 400 ಕೋಟಿ ರೂ.ಗಳ ಮೊತ್ತದಲ್ಲಿ ವಿಶ್ವ ದರ್ಜೆ ಮಟ್ಟದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.