×
Ad

ʼಸಂಪುಟ ಪುನರ್ ರಚನೆʼ: ಖರ್ಗೆ ನಿವಾಸಕ್ಕೆ ಸಚಿವರು, ಶಾಸಕರು ದೌಡು!

ʼನಾಯಕತ್ವ ಬದಲಾವಣೆʼ ವದಂತಿಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ಏನು?

Update: 2025-11-23 21:15 IST

ಬೆಂಗಳೂರು: ‘ಸಂಪುಟ ಪುನರ್ ರಚನೆ ಹಾಗೂ ನಾಯಕತ್ವ ಬದಲಾವಣೆ’ ವದಂತಿಗಳ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ‘ಸಂಪುಟ ಪುನರ್ ರಚನೆ’ಯಾದರೆ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿರುವವರು, ಸಚಿವ ಸ್ಥಾನದ ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ.

ಈ ನಡುವೆ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ, ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

‘ಮೂರು ದಿನಗಳಿಂದ ನಾನು ರಾಜ್ಯದಲ್ಲೇ ಇದ್ದೇನೆ. ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಬೇಸರವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಹೇಳುವುದಕ್ಕೆ ನನ್ನ ಹತ್ತಿರ ಏನೂ ಇಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಖರ್ಗೆ ಹೇಳಿದ್ದಾರೆ.

ಖರ್ಗೆ ನಿವಾಸಕ್ಕೆ ಸಚಿವರು, ಶಾಸಕರು ದೌಡು: 

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಎ.ಎಸ್.ಪೊನ್ನಣ್ಣ, ಕೊತ್ತನೂರು ಮಂಜುನಾಥ್ ಸೇರಿದಂತೆ ಹಲವರು ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಬೆಳಗಾವಿ ಅಧಿವೇಶನದ ಬಳಿಕ ಸಂಪುಟ ಪುನರ್ ರಚನೆಯಾಗಲಿದೆ ಎಂಬ ಮಾಹಿತಿ ಇದೆ. ಆ ಹಿನ್ನೆಲೆಯಲ್ಲಿ ಕೆಲವರು ಸಂಪುಟದಿಂದ ವಜಾಗೊಳ್ಳುವ ಆತಂಕದಲ್ಲಿದ್ದರೆ, ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಲಾಬಿ ನಡೆಸುತ್ತಿದ್ದಾರೆ. ಸಿಎಂ ಕಾನೂನು ಸಲಹೆಗಾರರಾಗಿರುವ ಎ.ಎಸ್. ಪೊನ್ನಣ್ಣ, ‘ಸಂಪುಟ ಪುನರ್ ರಚನೆಯಾದರೆ ಕೊಡಗಿಗೆ ಅವಕಾಶ ನೀಡಬೇಕು ಎಂದು ಖರ್ಗೆಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅದೇ ರೀತಿಯಲ್ಲಿ ಕೋಲಾರದ ಶಾಸಕ ಕೊತ್ತನೂರು ಮಂಜುನಾಥ್, ಬಂಗಾರಪೇಟೆ ಕ್ಷೇತ್ರದ ಎಸ್.ಎನ್. ನಾರಾಯಣಸ್ವಾಮಿ, ಮಾಲೂರಿನ ಕೆ.ವೈ.ನಂಜೇಗೌಡ, ಕೆಜಿಎಫ್‍ನ ರೂಪಕಲಾ ಶಶಿಧರ್ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಕೊತ್ತನೂರು ಮಂಜುನಾಥ್, ಖರ್ಗೆ ಅವರ ಬಳಿಕ ತಮ್ಮ ಹಕ್ಕನ್ನು ಮಂಡಿಸಿದ್ದಾರೆ.

ʼದಿಲ್ಲಿಗೆ ಹೋಗಿದ್ದು ಮಂತ್ರಿ ಸ್ಥಾನಕ್ಕಾಗಿʼ:

‘ನಾವು ದಿಲ್ಲಿಗೆ ಹೋಗಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಒತ್ತಡ ಹೇರಲು ನಾವು ಹೋಗಿರಲಿಲ್ಲ. ಬದಲಿಗೆ ತುಮಕೂರು ಜಿಲ್ಲೆಗೆ ಮತ್ತೊಂದು ಮಂತ್ರಿ ಸ್ಥಾನ ಕೊಡಿ ಎಂದು ಬೇಡಿಕೆ ಮಂಡಿಸಲು ನಾವು ದಿಲ್ಲಿಗೆ ಹೋಗಿದ್ದು’ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ಎಚ್.ಡಿ.ರಂಗನಾಥ್ ಸ್ಪಷ್ಟಣೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News