×
Ad

ಉಡುಪಿಯಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಮಾಷ್‌ ಮೇಕ್ಸ್‌ನ ಬಯೊಚಾರ್ ತಯಾರಿಕಾ ಘಟಕ ಸ್ಥಾಪನೆ : ಎಂ.ಬಿ.ಪಾಟೀಲ್

Update: 2025-06-20 20:53 IST

ಬೆಂಗಳೂರು : ‘ಸುಸ್ಥಿರ ಇಂಧನ ಪರಿಹಾರಗಳಲ್ಲಿ ಮುಂಚೂಣಿಯಲ್ಲಿ ಇರುವ ಡೆನ್ಮಾರ್ಕ್‍ನ ಮಾಷ್‌ ಮೇಕ್ಸ್ ಕಂಪನಿಯು ಉಡುಪಿಯಲ್ಲಿ ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಮಣ್ಣಿನ ಫಲವತ್ತತೆ ಸುಧಾರಿಸುವ ಗೋಡಂಬಿ ಸಂಸ್ಕರಣೆಯ ತ್ಯಾಜ್ಯ ಬಳಸಿ ಸಮೃದ್ಧ ಇಂಗಾಲ ಹೊಂದಿರುವ ಬಯೊಚಾರ್ ತಯಾರಿಸುವ ಘಟಕ ಸ್ಥಾಪಿಸಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಇದು ಭಾರತದಲ್ಲಿನ ಮೊದಲ ಅತ್ಯಾಧುನಿಕ ತಂತ್ರಜ್ಞಾನದ ಬಯೊಚಾರ್ ತಯಾರಿಕಾ ಘಟಕವಾಗಿರಲಿದೆ. ಇಂತಹ ಪರಿಸರ ಸ್ನೇಹಿ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಯ ಪ್ರಯತ್ನಗಳನ್ನು ಶ್ಲಾಘಿಸಿರುವ ಎಂ.ಬಿ.ಪಾಟೀಲ್, ಈ ಯೋಜನೆಗೆ ರಾಜ್ಯ ಸರಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಶುದ್ಧ ಇಂಧನ, ನಾವೀನ್ಯತೆ, ಸಂಶೋಧನೆ ಮತ್ತು ಅತ್ಯಾಧುನಿಕ ತಯಾರಿಕಾ ವಲಯಗಳಲ್ಲಿ ಕರ್ನಾಟಕದ ಕೈಗಾರಿಕಾ ಸಾಮರ್ಥ್ಯ ಬಲಪಡಿಸಲು ಹಾಗೂ ವಾಣಿಜ್ಯ ಸಹಯೋಗ ವೃದ್ಧಿಸುವ ಸಂಬಂಧ ರಾಜ್ಯದ ನಿಯೋಗ ಸ್ವೀಡನ್ ಮತ್ತು ಡೆನ್ಮಾರ್ಕ್‍ಗೆ ಭೇಟಿ ನೀಡಿದ್ದು, ಎಪಿರಾಕ್, ಮಾಷ್‌ ಮೇಕ್ಸ್ ಮತ್ತು ಡಬ್ಲ್ಯುಎಸ್ ಆಡಿಯೊಲೊಜಿ ಕಂಪನಿಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿತು.

ಎಪಿರಾಕ್‍ನ ಭಾರತ ಕಾರ್ಯಾಚರಣೆಯ ಮುಖ್ಯಸ್ಥ ಅರುಣ್ ಕುಮಾರ್ ಅವರು, ಕರ್ನಾಟಕದಲ್ಲಿನ ಕಂಪನಿಯ ಹೂಡಿಕೆ ಯೋಜನೆ ಹಾಗೂ ದೀರ್ಘಾವಧಿಯ ಮುನ್ನೋಟಗಳನ್ನು ಎಂ.ಬಿ.ಪಾಟೀಲ್ ಅವರ ಜೊತೆ ಹಂಚಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ. ಮತ್ತು 2030ರ ವೇಳೆಗೆ ಹೆಚ್ಚುವರಿಯಾಗಿ 1 ಸಾವಿರ ಕೋಟಿ ರೂ. ಹೂಡಿಕೆಯ ಯೋಜನೆಗಳನ್ನು ಅವರು ವಿವರಿಸಿದ್ದಾರೆ.

ರಾಜ್ಯದ ಕೈಗಾರಿಕಾ ಸಾಮರ್ಥ್ಯ, ಕುಶಲ ಮಾನವ ಸಂಪನ್ಮೂಲದ ಲಭ್ಯತೆ ಹಾಗೂ ಪೂರಕ ಮೂಲಸೌಲಭ್ಯಗಳು ಎಪಿರಾಕ್‍ನ ಭವಿಷ್ಯದ ತಯಾರಿಕಾ ಸಾಮರ್ಥ್ಯ ವಿಸ್ತರಣೆಗೆ ಕರ್ನಾಟಕವು ಸೂಕ್ತ ತಾಣವಾಗಿದೆ. ಕಂಪನಿಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರಕಾರವು ಅಗತ್ಯ ಬೆಂಬಲ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಶ್ರವಣ ಸಾಧನಗಳನ್ನು ತಯಾರಿಸುವ ಭಾರತದಲ್ಲಿನ ಮೊದಲ ಘಟಕವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿರುವ ಡಬ್ಲ್ಯುಎಸ್ ಆಡಿಯೊಲೊಜಿ ಕಂಪನಿಯು ತನ್ನ ಸದ್ಯದ ಹಾಗೂ ಭವಿಷ್ಯದ ವಹಿವಾಟು ವಿಸ್ತರಿಸಲು ಮುಂದಾಗಬೇಕು ಎಂದು ಮನವಿ ಮಾಡಿದ ಎಂ.ಬಿ.ಪಾಟೀಲ್, ಕಂಪನಿಯ ಅಗತ್ಯಕ್ಕೆ ತಕ್ಕಂತೆ ಅಗತ್ಯ ಉತ್ತೇಜನಾ ಕ್ರಮಗಳನ್ನು ಒದಗಿಸುವುದಾಗಿ ತಿಳಿಸಿದರು.

ಶ್ರವಣ ಸಾಧನಗಳು ದುರ್ಬಲ ವರ್ಗದವರಿಗೆ ಕೈಗೆಟುಕುವ ಬೆಲೆಗೆ ದೊರೆಯುವಂತಾಗಲು ಕಡಿಮೆ ವೆಚ್ಚದ ಶ್ರವಣ ಸಾಧನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಕಂಪನಿಯು ರಾಜ್ಯದ ನಿಯೋಗದ ಜೊತೆ ತನ್ನ ಭವಿಷ್ಯದ ಯೋಜನೆಗಳ ಮಾಹಿತಿ ಹಂಚಿಕೊಂಡಿತು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಇಂಜಿನಿಯರ್ ವೀರಭದ್ರಯ್ಯ ಅವರು ನಿಯೋಗದಲ್ಲಿ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News