×
Ad

ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಬೃಹತ್ ಧರಣಿ

Update: 2025-08-22 00:08 IST

ಬೆಂಗಳೂರು: ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಅಲೆಮಾರಿ ಸಮುದಾಯ ಮತ್ತು ಒಳಮೀಸಲಾತಿ ಹೋರಾಟಗಾರರು ವಿನೂತನ ರೀತಿಯಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಿ, ರಾಜ್ಯ ಸರಕಾರದ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್, ‘ನಾವು ಜನಸಂಖ್ಯೆಯ ಆಧಾರದಲ್ಲಿ ಒಳಮೀಸಲಾತಿ ಕೇಳುತ್ತಿಲ್ಲ. ಅಲೆಮಾರಿ ಸಮುದಾಯಗಳಿಗೆ ಪ್ರಾತಿನಿಧ್ಯದ ಆಧಾರದಲ್ಲಿ ಒಳಮೀಸಲಾತಿ ನೀಡಬೇಕು. ಎಲ್ಲರೂ ಶೇ.1ರಷ್ಟು ಮೀಸಲಾತಿ ಕೇಳುತ್ತಿದ್ದಾರೆ. ಆದರೆ ಅಲೆಮಾರಿ ಸಮುದಾಯಗಳಿಗೆ ಶೇ.2ರಷ್ಟು ಪ್ರತ್ಯೇಕ ಮೀಸಲಾತಿ ಕೊಡಬೇಕು. ಬಲಿಷ್ಠ ಸಮುದಾಯಗಳ ಒತ್ತಾಯಕ್ಕೆ ಹೆಚ್ಚು ಮೀಸಲಾತಿ ಕೊಡುವುದಲ್ಲ, ಮೀಸಲಾತಿ ನೀಡಬೇಕಿರುವುದು. ಗ್ರಾಮ ಪಂಚಾಯತ್ ಸದಸ್ಯರೂ ಇಲ್ಲದಿರುವ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲೆಮಾರಿ ಸಮುದಾಳಲ್ಲಿ ಸರಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯವೇ ಇಲ್ಲ. ಶಿಕ್ಷಣವೂ ಇಲ್ಲವಾಗಿದೆ. ಕಟ್ಟ ಕಡೆಯ ಸಮುದಾಯಗಳಿಗೆ ಮೀಸಲಾತಿ ನೀಡಬೇಕು. ಮಾದಿಗ ಸಮುದಾಯ ಸಂಘಟನೆಯಿದ್ದರೂ 30ವರ್ಷಗಳಿಂದ ಹೋರಾಟ ಮಾಡಿದೆ. ಇನ್ನೂ ಅಲೆಮಾರಿ ಸಮುದಾಯಗಳಿಗೆ ಸಂಘಟನೆಯೇ ಇಲ್ಲ. ಅದು ಸಾಮಾಜಿಕ ನ್ಯಾಯಕ್ಕಾಗಿ ಎಷ್ಟು ವರ್ಷ ಹೋರಾಟ ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸೋಣ. ದಯವಿಟ್ಟು ರಾಜಕೀಯ ನಾಯಕರನ್ನು ಹೋರಾಟಕ್ಕೆ ಕರೆದುಕೊಳ್ಳಬೇಡಿ. ಯಾಕೆಂದರೆ ಒಂದು ವೇಳೆ ಬಿಜೆಪಿ, ಆರೆಸ್ಸೆಸ್‍ನವರು ಹೋರಾಟಕ್ಕೆ ಬಂದಿದ್ದರೆ, ಸರಕಾರಕ್ಕೆ ಬಿಜೆಪಿ ಆರೆಸ್ಸೆಸ್ ಹೋರಾಟ ಎನ್ನುವ ಸಂದೇಶ ಹೋಗುತ್ತದೆ. ಅದು ಆಗಬಾರದು. ಕಾಂಗ್ರೆಸ್‍ನಲ್ಲಿರುವವರು ಬರಬಾರದು. ನಾನು ಹೋರಾಟಕ್ಕಾಗಿ ಕಾಂಗ್ರೆಸ್‍ಗೆ ರಾಜೀನಾಮೆ ನೀಡಲೂ ಸಿದ್ಧ ಎಂದು ದ್ವಾರಕನಾಥ್ ಅಭಿಪ್ರಾಯಪಟ್ಟರು.

ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಅಲೆಮಾರಿ ಸಮುದಾಯನ್ನು ಪ್ರಬಲರ ಜೊತೆ ಸೇರಿಸಿರುವುದು ಅಕ್ಷಮ್ಯ ಅಪರಾಧ ಎನ್ನುವುದನ್ನು ಸಚಿವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇವೆ. ಗೆಜೆಟ್ ಆಗುವುದಕ್ಕೂ ಮೊದಲು ಸರಕಾರ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಆ ಮೀಸಲಾತಿ ಸಿಗುವವರೆಗೂ ಹೋರಾಟಗಾರರು ಎಲ್ಲೂ ಹೋಗುವುದು ಬೇಡ ಎಂದು ಬೆಂಬಲ ಸೂಚಿಸಿದರು.

ಶಾಸಕ ಕೊತ್ತೂರು ಮಂಜುನಾಥ ಮಾತನಾಡಿ, ‘ನಾನು ಮತ್ತು ಮಾಜಿ ಸಚಿವ ಎಚ್.ಆಂಜನೇಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೇವೆ. ಅಧಿವೇಶನ ಇರುವುದರಿಂದ ಶನಿವಾರ ಸಮಯ ಕೊಡುತ್ತೇನೆ, ಮುಖಂಡರು ಬಂದು ಮಾತನಾಡಿ ಎಂದು ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಈಗ ನಡೆಯುತ್ತಿರುವ ಅಧಿವೇಶನದಲ್ಲೇ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ನೀಡುವ ಕುರಿತು ಘೋಷಣೆ ಮಾಡದಿದ್ದರೆ, ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು. ಧರಣಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಅಂಕಣಕಾರ ಶಿವಸುಂದರ್, ನಟ ಚೇತನ್ ಅಹಿಂಸಾ, ಅಂಬಣ್ಣ ಅರೋಲಿಕರ್, ಬಸವರಾಜ್ ಕೌತಾಳ್, ಎಸ್. ಮಾರೆಪ್ಪ, ಲೋಕೇಶ್ ಗೋಸಂಗಿ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News