ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂ.ನಿಗದಿ : ರಾಜ್ಯ ಸರಕಾರ ಆದೇಶ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ. 12 : ರಾಜ್ಯದ ಎಲ್ಲ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರ ಗರಿಷ್ಠ 200 ರೂಪಾಯಿ ನಿಗದಿಪಡಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಒಳಾಡಳಿತ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಬಿ.ಕೆ.ಭುವನೇಂದ್ರ ಕುಮಾರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯದ ಎಲ್ಲ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ 200 ರೂ. ನಿಗದಿಪಡಿಸುವುದಾಗಿ ಪ್ರಕಟಿಸಿದ್ದರು. ಆ ಹಿನ್ನೆಲೆಯಲ್ಲಿ ಇದೀಗ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಅಧಿಸೂಚನೆ ಹೊರಡಿಸಿದ್ದು, ಇದು ಗೆಜೆಟ್ ನೋಟೀಫಿಕೇಷನ್ ಆಗುವುದು ಮಾತ್ರ ಬಾಕಿ ಇದೆ. ಗೆಜೆಟ್ ನೋಟೀಫಿಕೇಷನ್ ಪ್ರಕಟವಾದ ದಿನದಿಂದ ಚಿತ್ರಮಂದಿರಗಳ ಟಿಕೆಟ್ ದರ 200ರೂ.ಜಾರಿಗೆ ಬರಲಿದೆ. ಸರಕಾರದ ಈ ಆದೇಶದಿಂದ ಮನಸೋ ಇಚ್ಛೆ ಟಿಕೆಟ್ ದರ ವಸೂಲಿಗೆ ತಡೆ ಬೀಳಲಿದೆ. ಆದರೆ, 75 ಸೀಟುಗಳು ಹಾಗೂ ಅದಕ್ಕಿಂತ ಕಡಿಮೆ ಸೀಟುಗಳಿರುವ ಬಹುಪರದೆಯ ಚಿತ್ರಮಂದಿರಗಳಿಗೆ ಗರಿಷ್ಠ 200 ರೂ.ಟಿಕೆಟ್ ದರ ನಿಯಮ ಅನ್ವಯವಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.