×
Ad

ರಕ್ಷಣಾ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿಯನ್ನು ಭೇಟಿ : ಸಚಿವ ಎಂ.ಬಿ.ಪಾಟೀಲ್

Update: 2025-07-11 19:20 IST

ಬೆಂಗಳೂರು : ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ-ಬೆಳಗಾವಿ-ವಿಜಯಪುರ ಮತ್ತು ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ರಕ್ಷಣಾ(ಡಿಫೆನ್ಸ್) ಕಾರಿಡಾರ್ ಮಂಜೂರು ಮಾಡುವ ಸಂಬಂಧ ಸದ್ಯದಲ್ಲೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಧಾನಿ ಭೇಟಿಯ ನಂತರ, ಈ ವಿಚಾರವು ಕೇಂದ್ರ ಸಚಿವ ಸಂಪುಟದ ಮುಂದೆ ಬರಬೇಕಾಗುತ್ತದೆ ಎಂದು ಹೇಳಿದರು.

ಇಸ್ರೇಲ್-ಇರಾನ್, ರಶ್ಯಾ-ಉಕ್ರೇನ್ ಸಂಘರ್ಷ ಮತ್ತು ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿನ ಬದಲಾವಣೆಗಳಿಂದಾಗಿ ಮುಂದಿನ 20 ವರ್ಷಗಳ ಕಾಲ ರಕ್ಷಣಾ ಉದ್ಯಮ, ಏರೋಸ್ಪೇಸ್, ಸೆಮಿಕಂಡಕ್ಟರ್, ಎಐ ಮುಂತಾದ ಡೀಪ್-ಟೆಕ್ ಆಧಾರಿತ ಉದ್ಯಮಗಳಿಗೆ ಬೇಡಿಕೆ ಇರಲಿದೆ. ನ್ವಿಡಿಯಾ ಕಂಪನಿ ಈ ವಲಯದಲ್ಲಿ 4 ಟ್ರಿಲಿಯನ್ ಡಾಲರ್ ವಹಿವಾಟು ದಾಖಲಿಸಿರುವ ಪ್ರಪ್ರಥಮ ಕಂಪನಿಯಾಗಿ ಹೊರಹೊಮ್ಮಿದೆ. ಇದನ್ನು ನಾವು ಸದಾವಕಾಶವಾಗಿ ಬಳಸಿಕೊಳ್ಳಲು ಕರ್ನಾಟಕವನ್ನು ಸಜ್ಜುಗೊಳಿಸಬೇಕಾದ ಜರೂರಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ದೇವನಹಳ್ಳಿ ಸಮೀಪ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ಭೂಮಿ ಬೇಕಾಗಿದೆ. ಆದರೆ ರೈತರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜು.15ರಂದು ಸಭೆ ಕರೆದಿದ್ದಾರೆ. ಸರಕಾರವೇನಾದರೂ ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ಸರಿಯಾದ ಪರಿಹಾರ ಕೊಡಬೇಕೆನ್ನುವುದು ನಮ್ಮ ಕಳಕಳಿಯಾಗಿದೆ. ಏಕೆಂದರೆ, ರೈತರು ಕೂಡ ನಮ್ಮವರೇ ಆಗಿದ್ದಾರೆ ಎಂದು ಅವರು ನುಡಿದರು.

ಬೆಂಗಳೂರಿನಲ್ಲಿ ಎರಡನೆಯ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವರನ್ನು ಮುಂದಿನ ವಾರ ದಿಲ್ಲಿಗೆ ಹೋಗಿ ಭೇಟಿಯಾಗಿ, ಮಾತುಕತೆ ನಡೆಸಲಾಗುವುದು. ನೋಯಿಡಾ, ನವಿ ಮುಂಬೈ ನೂತನ ವಿಮಾನ ನಿಲ್ದಾಣಗಳ ಅಭಿವೃದ್ಧಿಯನ್ನು ವಿಸ್ತೃತವಾಗಿ ಗಮನಿಸಿ, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.

ಸಿಎಂ ಕುರ್ಚಿ, ಕೆಪಿಸಿಸಿ ಅಧ್ಯಕ್ಷರ ಕುರ್ಚಿ ಖಾಲಿ ಇಲ್ಲ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯಾಗಲಿ, ಕೆಪಿಸಿಸಿ ಅಧ್ಯಕ್ಷರ ಹುದ್ದೆಯಾಗಲಿ ಸದ್ಯಕ್ಕೆ ಖಾಲಿ ಇಲ್ಲ. ಆದುದರಿಂದ, ಈ ಬಗ್ಗೆ ಯಾರೂ ಮಾತನಾಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ಸಿನಲ್ಲಿ ಹೈಕಮಾಂಡೇ ಪರಮೋಚ್ಚ. ಅದು ಹೇಳುವ ಮಾತೇ ಅಂತಿಮ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ.

-ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕೆ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News