×
Ad

ಮನರೇಗಾ ಯೋಜನೆಯನ್ನು ಕೇಂದ್ರ ಬಿಜೆಪಿ ಸರಕಾರ ಕೊಂದಿದೆ: ಡಿ.ಕೆ. ಶಿವಕುಮಾರ್

Update: 2026-01-13 21:43 IST

Photo source: X/@DKShivakumar

ಬೆಂಗಳೂರು: ಗ್ರಾಮೀಣ ಭಾಗದ ಅಭಿವೃದ್ಧಿಗೆ ನೆರವಾಗಿದ್ದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ಕೇಂದ್ರ ಬಿಜೆಪಿ ಸರಕಾರ ಕೊಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ‘ಮನರೇಗಾ ಬಚಾವ್ ಸಂಗ್ರಾಮ’ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದಲ್ಲಿ ಸಂವಿಧಾನದ ಮೂಲಕ ಬಡವರಿಗೆ ಉದ್ಯೋಗ ಖಾತರಿ ಹಕ್ಕನ್ನು ನೀಡಿದ್ದರು. ಇದರಿಂದ ನಮ್ಮ ರಾಜ್ಯದ ಪಂಚಾಯಿತಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಪ್ರತಿ ವರ್ಷ 6 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದವು. ಈ ಕೆಲಸಗಳನ್ನು ಸ್ಥಳೀಯ ಪಂಚಾಯಿತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು ಎಂದು ಅವರು ಹೇಳಿದರು.

ಹೊಸ ಕಾಯ್ದೆ ಜಾರಿ ಅಸಾಧ್ಯ: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಇದೆಲ್ಲದಕ್ಕೂ ಕುತ್ತು ಬಂದಿದೆ. ಈ ಹೊಸ ಕಾಯ್ದೆಯಲ್ಲಿ ಗ್ರಾಮಗಳಲ್ಲಿ ಯಾವ ಕಾಮಗಾರಿ ನಡೆಯಬೇಕು ಎಂಬುದನ್ನು ಪಂಚಾಯಿತಿಗಳು ತೀರ್ಮಾನಿಸಲು ಆಗುವುದಿಲ್ಲ. ದಿಲ್ಲಿಯಲ್ಲಿ ಕೂತಿರುವ ಕೇಂದ್ರ ಸರಕಾರ ತೀರ್ಮಾನ ಮಾಡಲಿದೆ ಎಂದು ಅವರು ಹೇಳಿದರು.

ಇನ್ನು ಈ ಯೋಜನೆಯಲ್ಲಿದ್ದ ಶೇ.90:10 ಅನುಪಾತದ ಅನುದಾನವನ್ನು, ಶೇ.60:40 ಅನುಪಾತಕ್ಕೆ ಬದಲಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುದಾನ ಹಂಚಿಕೊಳ್ಳಬೇಕಾಗಿದೆ. ಇದರಿಂದ ರಾಜ್ಯ ಸರಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಕೇಂದ್ರ ಸರಕಾರ ಎಷ್ಟೇ ಪ್ರಯೋಗ ಮಾಡಿದರೂ ಈ ನೂತನ ಕಾಯ್ದೆಯನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಜಾರಿಗೆ ತರಲು ಸಾಧ್ಯವಿಲ್ಲ. ಈ ಕಾಯ್ದೆ ಜಾರಿ ಅಸಾಧ್ಯ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದು ಅವರು ತಿಳಿಸಿದರು.

ಹೋರಾಟಕ್ಕೆ ಆಸಕ್ತಿ ತೋರದವರನ್ನು ಕಿತ್ತು ಹಾಕಲಾಗುವುದು: ಎಐಸಿಸಿಯವರು ಕಾರ್ಯಕಾರಿ ಸಮಿತಿ ಸಭೆ ಮಾಡಿ, ಈ ವಿಚಾರವಾಗಿ ಪಕ್ಷದ ವತಿಯಿಂದ ಯಾವ ರೀತಿ ಹೋರಾಟ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ. ಮೊದಲ ಹಂತದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಲಿದ್ದಾರೆ. ತಾಲೂಕು ಮಟ್ಟಗಳಲ್ಲಿ ನೀವುಗಳು ಮಾಧ್ಯಮಗೋಷ್ಠಿ ಮಾಡಬೇಕು. ಪರಿಷತ್ ಸದಸ್ಯರು, ಸಂಸದರನ್ನು ಶಾಸಕರಿಲ್ಲದ ಕ್ಷೇತ್ರಗಳಿಗೆ ವೀಕ್ಷಕರಾಗಿ ನೇಮಕ ಮಾಡಿದ್ದು, ಎಲ್ಲರೂ ಮಾಧ್ಯಮಗೋಷ್ಠಿ ಮಾಡಬೇಕು ಎಂದು ಅವರು ಸೂಚಿಸಿದರು.

ಎಐಸಿಸಿ ನಿರ್ದೇಶನ ನೀಡಿರುವ ಎಲ್ಲ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಇದನ್ನು ಪಾಲಿಸದ ವೀಕ್ಷಕರು, ಪದಾಧಿಕಾರಿಗಳ ಬಗ್ಗೆ ವರದಿ ನೀಡಿ ಎಂದು ಎಐಸಿಸಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದ್ದು, ಇದರಲ್ಲಿ ಆಸಕ್ತಿ ತೋರದವರನ್ನು ಕಿತ್ತುಹಾಕಲಾಗುವುದು. ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ಹೊರ ರಾಜ್ಯದಿಂದ ತಂಡ ಆಗಮಿಸುತ್ತಿದೆ. ಈ ಸಮಿತಿ ಅನೇಕ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲಿದೆ ಎಂದು ಅವರು ನುಡಿದರು.

ಸಚಿವ ಸಂಪುಟದಲ್ಲಿ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನ: ನಾಳೆ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ 2 ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನ ಮಾಡಲಾಗುವುದು. ಈ ಅಧಿವೇಶನದಲ್ಲಿ ಮನರೇಗಾ ಯೋಜನೆ ಮರುಜಾರಿಯ ಮಹತ್ವ ಹಾಗೂ ಕೇಂದ್ರ ಸರಕಾರದ ನೂತನ ಕಾಯ್ದೆಯ ಅನಾನುಕೂಲಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಲಾಗುವುದು. ನಂತರ ಸರಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಜ.26ರಿಂದ ಫೆ.7ರವರೆಗೆ ಎಲ್ಲ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 5-10 ಕಿ.ಮೀ ಪಾದಯಾತ್ರೆ ಮಾಡಬೇಕು. ಇದರಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು, ನಮ್ಮ ನಾಯಕರು, ಶಾಸಕರು ಹಾಗೂ ಸಚಿವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಬೇಕು. ನಂತರ ಮನರೇಗಾ ಮರುಜಾರಿಗೆ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಬೇಕು. ಪ್ರಮುಖವಾಗಿ ಶಿಕಾರಿಪುರದಲ್ಲಿ ನಡೆಯುವ ಪಾದಯಾತ್ರೆಗೆ ನಾನು ಬಂದೆ ಬರುತ್ತೇನೆ. ಎಲ್ಲಿ ನಮ್ಮ ಶಾಸಕರಿಲ್ಲವೊ ಆ ಕ್ಷೇತ್ರಗಳಲ್ಲಿ ನಾನು ಪಾದಯಾತ್ರೆ ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ಪಕ್ಷದ ಕಚೇರಿ ಕಟ್ಟಣ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಿ: ನೂತನ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ದಿನಾಂಕ ನೀಡಿದ ಬಳಿಕ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಮಾಡುತ್ತೇವೆ. ಅದೇ ದಿನ ನಿಮ್ಮ ಕ್ಷೇತ್ರಗಳಲ್ಲೂ ಶಂಕುಸ್ಥಾಪನೆ ಮಾಡಬೇಕು. ವರ್ಚುವಲ್ ಮೂಲಕ ಬೆಂಗಳೂರಿನ ಕಾರ್ಯಕ್ರಮದ ಜೊತೆ ಸಂಪರ್ಕ ಸಾಧಿಸಲಾಗುವುದು ಎಂದು ಅವರು ತಿಳಿಸಿದರು.

ಈ ಹಿಂದೆ ಪಕ್ಷದ ಆಸ್ತಿಯಾಗಿ 19 ನಿವೇಶನ, 45 ಸ್ವಂತ ಕಟ್ಟಡ ಇದ್ದವು. ನಾನು ಇದರ ಜವಾಬ್ದಾರಿ ಪಡೆದ ನಂತರ 64 ನಿವೇಶನಗಳ ನೋಂದಣಿಯಾಗಿದೆ. ಇನ್ನು 58 ಆಸ್ತಿಗಳ ನೋಂದಣಿ ಕಾರ್ಯ ಪ್ರಕ್ರಿಯೆ ಹಂತದಲ್ಲಿದೆ. ಒಟ್ಟು 122 ಆಸ್ತಿಗಳಾಗಿದ್ದು, 186 ಆಸ್ತಿಗಳನ್ನು ಮಾಡಬೇಕಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ಕಚೇರಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.

ಕೆಲವರು ತಮ್ಮ ಸ್ವಂತ ಆಸ್ತಿಯನ್ನು ಪಕ್ಷಕ್ಕೆ ಬರೆದುಕೊಟ್ಟಿದ್ದಾರೆ. ಕೋನರೆಡ್ಡಿ, ಶರಣಪ್ರಕಾಶ್ ಪಾಟೀಲ್, ಸುಧಾಕರ್, ಉದಯ್, ಸಿರಗುಪ್ಪ ನಾಗರಾಜ್ ಸೇರಿದಂತೆ 22 ಮಂದಿ ತಮ್ಮ ಆಸ್ತಿಯನ್ನು ಪಕ್ಷಕ್ಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಯಾವುದಾದರೂ ಜಾಗ ಇದ್ದರೆ ಹೇಳಿ, ಬಿಡಿಎ ಅಥವಾ ಪಾಲಿಕೆಯಿಂದ ಮಂಜೂರು ಮಾಡಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News