×
Ad

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ, ರೈತರು ಆತಂಕಪಡುವ ಅಗತ್ಯವಿಲ್ಲ: ಸಚಿವ ಚಲುವರಾಯಸ್ವಾಮಿ

Update: 2025-07-25 17:42 IST

ಚಲುವರಾಯಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿಯೂ ರಸಗೊಬ್ಬರ ಕೊರತೆ ಇಲ್ಲ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅಲ್ಲದೆ, ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ದಾಸ್ತಾನಿರುವ ಉಳಿಕೆ ರಸಗೊಬ್ಬರವನ್ನು ಪೂರೈಕೆ ಮಾಡಿ ಸರಿದೂಗಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರಿಗೆ ಯಾವುದೇ ರೀತಿ ತೊಂದರೆಗಳಾಗದಂತೆ ನಿಗಾ ವಹಿಸಲು ಕೃಷಿ ಇಲಾಖೆಯ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವರ್ಷ ಮುಂಗಾರು ಬೇಗ ಆರಂಭವಾದ ಕಾರಣ ಹಾಗೂ ಸುಮಾರು 2ಲಕ್ಷ ಹೆಕ್ಟೇರ್ ಮುಸುಕಿನಜೋಳ ಪ್ರದೇಶ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಯೂರಿಯಾಕ್ಕೆ ಬೇಡಿಕೆ ಹೆಚ್ಚಿದೆ ಎಂದರು.

ರಾಜ್ಯದಲ್ಲಿ ನಮ್ಮ ಗುರಿಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದೆ. ಜುಲೈ ತಿಂಗಳಲ್ಲಿನ ಬೇಡಿಕೆ ಆಧಾರದಲ್ಲಿನ ವಿತರಣೆಯ ನಂತರವೂ ದಾಸ್ತಾನು ಉಳಿಕೆ ಇದೆ. ಒಂದು ವೇಳೆ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿರುವ ಜಿಲ್ಲೆಗಳಿಂದ ಮರುವಿಂಗಡಣೆ ಮಾಡಿ, ಸರಬರಾಜು ಮಾಡಲಾಗುವುದು. ಕೃಷಿಕರು ಗೊಂದಲಕ್ಕೆ ಒಳಗಾಗಬಾರದು ಎಂದು ಚಲುವರಾಯಸ್ವಾಮಿ ಮನವಿ ಮಾಡಿದರು.

ಜುಲೈ ವರೆಗೆ ರಾಜ್ಯಕ್ಕೆ ಕೇಂದ್ರ ಸರಕಾರದಿಂದ 5,34,009 ಮೆ.ಟನ್. ರಸಗೊಬ್ಬರ (ಎಲ್ಲ ವಿಧದ ರಸಗೊಬ್ಬರ ಸೇರಿ) ಹಂಚಿಕೆಯಾಗಿದೆ. ಇದರಲ್ಲಿ ಈವರೆಗೆ 4,30,633 ಮೆ.ಟನ್. ಸರಬರಾಜಾಗಿದೆ. ಎಪ್ರಿಲ್‍ನಿಂದ ಜುಲೈ ವರೆಗೆ ರಾಜ್ಯದಲ್ಲಿ 6,80,655 ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದ್ದು, ಕೇಂದ್ರ ಸರಕಾರದಿಂದ 6,82,500 ಮೆ.ಟನ್ ಹಂಚಿಕೆಯಾಗಿದೆ. ಇದರಲ್ಲಿ 5,26,817ಮೆಟ್ರಿಕ್ ಟನ್ ಸರಬರಾಜಾಗಿದೆ ಎಂದರು.

ರಾಜ್ಯದಲ್ಲಿ 3,46,499 ಯೂರಿಯಾ ಹಳೆಯ ದಾಸ್ತಾನು ಉಳಿಕೆ ಇದ್ದು, ಕೇಂದ್ರದಿಂದ ಸರಬರಾಜಾದ ಯೂರಿಯಾ ಸೇರಿದಂತೆ 8,73,315 ಮೆಟ್ರಿಕ್ ಟನ್ ಒಟ್ಟು ಲಭ್ಯತೆ ಇತ್ತು, ಇದರಲ್ಲಿ 7,08,859 ಮೆಟ್ರಿಕ್ ಟನ್ ಯೂರಿಯಾವನ್ನು ವಿವಿಧ ಜಿಲ್ಲೆಗಳಿಗೆ ವಿತರಿಸಿದ್ದು, ರೈತರಿಗೂ ಮಾರಾಟ ಮಾಡಲಾಗಿದೆ. ಇನ್ನು 1,64,56 ಮೆಟ್ರಕ್ ಟನ್ ಯೂರಿಯ ದಾಸ್ತಾನು ಉಳಿಕೆಯಿದೆ. ಅಲ್ಲದೆ ಕೇಂದ್ರದಿಂದ ಹಂತ-ಹಂತವಾಗಿ ಪೂರೈಕೆಯಾಗುವ ರಸಗೊಬ್ಬರವನ್ನು ಆಗಿಂದಾಗಲೇ ಹಂಚಿಕೆ ಮಾಡಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸರಕಾರ ನಿರಂತರವಾಗಿ ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯೂರಿಯ ಶೀಘ್ರ ಪೂರೈಕೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಯಾವುದೇ ಸಮಸ್ಯೆಗಳಿಲ್ಲದಂತೆ ರಸಗೊಬ್ಬರ ಪೂರೈಕೆ ನಿವಾರಿಸಲು ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಪರಿಣಾಮಕಾರಿ: ‘ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ನ್ಯಾನೋ ಯೂರಿಯಾ ಲಭ್ಯವಿದ್ದು ಇದು ಪರಿಣಾಮಕಾರಿ ಮತ್ತು ಲಾಭದಾಯಕ. ಉಳಿತಾಯವೂ ಆಗಲಿದೆ. ಆದುದರಿಂದ ಕೃಷಿಕರು ಈ ಬಗ್ಗೆಯೂ ಗಮನಹರಿಸಬೇಕೆಂದು. ಅತಿಯಾದ ರಸಗಬ್ಬರ ಬಳಕೆ ಭೂಮಿಯ ಫಲವತ್ತತೆ ಹಾಗೂ ಮಾನವನ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದ್ದು, ಮುಂದಿನ ಭವಿಷ್ಯದ ದೃಷ್ಟಿಯಿಂದ ರಸಗೊಬ್ಬರಗಳ ಬಳಕೆ ಹಸಿರು ಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವುದು ಅಗತ್ಯವಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು ಶೇ.75ರಷ್ಟು ಬಿತ್ತನೆಯಾಗಿದೆ. ಶೇ.100ರಷ್ಟು ಗುರಿಸಾಧನೆ ನಿರೀಕ್ಷೆ ಹೊಂದಲಾಗಿದೆ’

-ಚಲುವರಾಯಸ್ವಾಮಿ, ಕೃಷಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News