ಅಕ್ರಮ ಗಣಿ ಆಸ್ತಿ ಜಪ್ತಿ ಕಾನೂನಿಗೆ ಅಧಿಕೃತ ಮುದ್ರೆ : ಸಚಿವ ಎಚ್.ಕೆ.ಪಾಟೀಲ್
ಎಚ್.ಕೆ.ಪಾಟೀಲ್
ಬೆಂಗಳೂರು, ಸೆ.10: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸೃಷ್ಟಿಯಾದ ಆಸ್ತಿಯನ್ನು ಜಪ್ತಿ ಮಾಡುವ ಜತೆಗೆ ವಸೂಲಾತಿ ಆಯುಕ್ತರ ನೇಮಕಾತಿ ಕಾನೂನಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ಖರೀದಿದಾರರು, ಮಧ್ಯವರ್ತಿಗಳು ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದ ಸಂಘಟಿತ ಅಪರಾಧ ಮಾಡಿರುವುದಲ್ಲದೆ, ಅಕ್ರಮ ಆಸ್ತಿ ಸೃಷ್ಟಿಸಿದ್ದಾರೆ. ಈ ಹಿನ್ನೆಲೆ ಕಾನೂನು ರೀತ್ಯಾ ಜಪ್ತಿ ಮಾಡಲು ಸರಕಾರ ಮುಂದಾಗಿದೆ ಎಂದರು.
ಆಸ್ತಿ ಹಾಗೂ ಇತರೆ ಮೌಲ್ಯ ವಸ್ತುಗಳು ಜಪ್ತಿ, ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ವಸೂಲಿ ಆಯುಕ್ತರೊಬ್ಬರ ನೇಮಕಾತಿಯ ಅವಶ್ಯಕತೆಯನ್ನು ಸರಕಾರ ಮನಗಂಡು ಈ ಅಧಿನಿಯಮವನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಇಂದು ಅಧಿಸೂಚಿಸಿದೆ. ಒಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಆಸ್ತಿಯನ್ನು ಗುರುತಿಸಿ, ಅಂತಹ ಆಸ್ತಿಯನ್ನು ಜಪ್ತಿ ಮಾಡಲು ಸರಕಾರಕ್ಕೆ ಅಸ್ತ್ರ ದೊರೆತಿದೆ ಎಂದು ಉಲ್ಲೇಖಿಸಿದರು.
ರಾಜ್ಯದಲ್ಲಿ ಗಣಿ ಹಗರಣಗಳಿಗೆ ತಡೆ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಮಾರ್ಗದರ್ಶನದಲ್ಲಿ ಹಲವಾರು ಕ್ರಮಗಳನ್ನು ಸರಕಾರ ಕೈಗೊಳ್ಳಲು ಪ್ರಾರಂಭಿಸಿತ್ತು.ಇದೀಗ ಈ ಐತಿಹಾಸಿಕ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಸರಕಾರದ ಬದ್ದತೆಗೆ ಮುದ್ರೆ ಒತ್ತಿದ್ದಾರೆ. ಕನ್ನಡಿಗರ ಆಸ್ತಿ ಕನ್ನಡಿಗರಿಗೆ ಮರಳಿಸುವ ಉದ್ದೇಶ ಈಡೇರಿದೆ. ನಮ್ಮ ಪಕ್ಷ ಮತ್ತು ಸರಕಾರ ಈ ಮೊದಲು ಕನ್ನಡ ನಾಡಿನ ಜನತೆಗೆ ನೀಡಿದ ವಾಗ್ದಾನವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದೆ ಎಂದು ಸಚಿವರು ತಿಳಿಸಿದರು.