‘ಅಕ್ರಮ ಗಣಿಗಾರಿಕೆ’ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವ ಎಚ್.ಕೆ.ಪಾಟೀಲ್ ಪತ್ರ
ಬೆಂಗಳೂರು : ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ 7 ಪುಟಗಳ ಸುದೀರ್ಘ ಪತ್ರವನ್ನು ಬರೆದಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕೆಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳು ನಡೆಸಿದ ಗಣಿ ಅಕ್ರಮಗಳಿಂದಾಗಿ, ಸರಕಾರಕ್ಕೆ ಸುಮಾರು 1.50 ಲಕ್ಷ ಕೋಟಿ ರೂ.ನಷ್ಟವಾಗಿರುವ ಬಗ್ಗೆ 2017-18ರಲ್ಲಿ ನನ್ನ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಬಹಿರಂಗಗೊಳಿಸಿತ್ತು ಎಂಬುದನ್ನು ಎಚ್.ಕೆ.ಪಾಟೀಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಬೆಂಗಳೂರಿನಿಂದ ಬಳ್ಳಾರಿವರೆಗೆ 320 ಕಿ.ಮೀ. ಪಾದಯಾತ್ರೆ ಮಾಡಿದೆವು. 2013ರಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಕೆಲವು ಪ್ರಕರಣಗಳನ್ನು ವಿವಿಧ ತನಿಖಾ ಸಂಸ್ಥೆಗಳಿಗೆ ವಹಿಸಲಾಗಿತ್ತು. ಕೆಲವು ಪ್ರಕರಣಗಳಲ್ಲಿ ಮಾತ್ರ ಪ್ರಮುಖ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಆದರೆ, ಇನ್ನೂ ಅನೇಕ ಪ್ರಕರಣಗಳು ಎಸ್‍ಐಟಿ ವಿಚಾರಣೆಯ ಹಂತದಲ್ಲೆ ಇವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆಯ ಶೇ.7ರಷ್ಟು ಪ್ರಕರಣಗಳು ಮಾತ್ರ ತನಿಖೆಗೆ ಒಳಪಟ್ಟಿವೆ. ಉಳಿದ ಶೇ.93ರಷ್ಟು ಪ್ರಕರಣಗಳು ಇನ್ನೂ ತನಿಖೆಗೆ ಒಳಪಟ್ಟಿಲ್ಲ. ಇದಕ್ಕೆ ಅಧಿಕಾರಿ ವರ್ಗದ ನಿರ್ಲಕ್ಷ್ಯವೇ ಕಾರಣ. ಆದುದರಿಂದ, ಸರಕಾರಕ್ಕೆ ಆಗಿರುವ ನಷ್ಟವನ್ನು ವಸೂಲು ಮಾಡಲು ಪ್ರತ್ಯೇಕವಾಗಿ ‘ವಸೂಲಿ ಆಯುಕ್ತ’ರನ್ನು ನೇಮಿಸಬೇಕು. ಇದಕ್ಕೆ ಸಹಕಾರಿಯಾಗುವಂತೆ ಪೊಲೀಸ್ ಇಲಾಖೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಕೋರಿದ್ದಾರೆ.
ಅಲ್ಲದೇ. ಅಕ್ರಮ ಗಣಿಗಾರಿಕೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ರಾಜಕೀಯ ಪತ್ರವಲ್ಲ: ರಾಜ್ಯ ಸರಕಾರಕ್ಕೆ ಒಳ್ಳೆಯ ಹೆಸರು ಬರಬೇಕು ಅನ್ನೋ ಕಾರಣಕ್ಕೆ ಪತ್ರ ಬರೆದಿದ್ದೇನೆ. ಅದು ರಾಜಕೀಯ ಪತ್ರವಲ್ಲ, ರಾಜ್ಯದ ಹಿತದೃಷ್ಟಿಯಿಂದ ಬರೆದಿರುವ ಪತ್ರ. ಈಗಾಗಲೆ ಮುಖ್ಯಮಂತ್ರಿಗೆ ಪತ್ರವನ್ನು ತೋರಿಸಿದ್ದು, ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ, ಕೇವಲ ಶೇ.7ರಷ್ಟು ಪ್ರಕರಣಗಳಲ್ಲಿ ಮಾತ್ರ ತನಿಖೆಯಾಗುತ್ತಿದೆ. ಶೇ.0.2ರಷ್ಟು ಪ್ರಕರಣಗಳಲ್ಲಿ ತೀರ್ಪು ಬಂದಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯದ ಸುಮಾರು 1.50 ಲಕ್ಷ ಕೋಟಿ ರೂ.ಲೂಟಿಯಾಗಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ 9 ಪ್ರಕರಣಗಳನ್ನು ನಾವು ಸಿಬಿಐ ತನಿಖೆಗೆ ವಹಿಸಿ ಆದೇಶಿಸಿದ್ದೆವು. ಆದರೆ, ಅದರಲ್ಲಿ ಮೂರು ಪ್ರಕರಣಗಳಲ್ಲಿ ಮಾತ್ರ ತಾವು ತನಿಖೆ ನಡೆಸುವುದಾಗಿ ಸಿಬಿಐ ಉತ್ತರಿಸಿದೆ. ಉಳಿದ ಆರು ಪ್ರಕರಣಗಳನ್ನು ವಾಪಸ್ ಕಳುಹಿಸಿದ್ದಾರೆ. ವಿಶೇಷ ತನಿಖಾ ತಂಡ(ಎಸ್‍ಐಟಿ)ದಲ್ಲಿ ಬಹುತೇಕ ಪ್ರಕರಣಗಳ ತನಿಖೆಯಾಗಿಲ್ಲ. ಆದುದರಿಂದ, ಮುಖ್ಯಮಂತ್ರಿ ಪತ್ರ ಬರೆದು ವಸ್ತುಸ್ಥಿತಿ ವಿವರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.