×
Ad

ರೈತರಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ಪೂರೈಸಲು ಬದ್ಧ : ಸಚಿವ ಕೆ.ಜೆ.ಜಾರ್ಜ್

Update: 2026-02-27 18:00 IST

ಬೆಂಗಳೂರು, ಫೆ. 27: ‘ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ಗಂಟೆ ವಿದ್ಯುತ್ ನೀಡಲು ಸರಕಾರ ಬದ್ಧವಾಗಿದ್ದು, ಅದಕ್ಕಾಗಿ ಕುಸುಮ-ಸಿ ಯೋಜನೆಯಡಿ ಕೃಷಿ ಫೀಡರ್‍ಗಳ ಸೌರೀಕರಣ ಕಾರ್ಯವನ್ನು ತ್ವರಿತಗೊಳಿಸಲಾಗುತ್ತಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಕ್ವೀನ್ಸ್‌ ರಸ್ತೆಯಲ್ಲಿನ ಕೆಪಿಸಿಸಿ ಪ್ರದೇಶ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮುಖಂಡರು ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಕುಸುಮ್-ಸಿ ಯೋಜನೆ ಮೂಲಕ ಕೃಷಿಗೆ ವಿದ್ಯುತ್ ಒದಗಿಸುವ ಉಪ ಕೇಂದ್ರಗಳನ್ನು ಸೌರೀಕರಣಗೊಳಿಸಿ 2500 ಮೆ.ವ್ಯಾ. ಸೌರ ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ ರೈತರಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದರು.

ದೇಶದಲ್ಲೇ ಅತಿಹೆಚ್ಚು ಅದರೆ ಶೇ.80ರಷ್ಟು ಸಬ್ಸಿಡಿಯೊಂದಿಗೆ ಕುಸುಮ್- ಬಿ ಯೋಜನೆಯಡಿ ಸೋಲಾರ್ ಪಂಪ್‍ಸೆಟ್ ಒದಗಿಸುತ್ತಿದ್ದೇವೆ. ಇದು ಕೃಷಿ ಕ್ಷೇತ್ರಕ್ಕೆ ಇಂಧನ ಇಲಾಖೆಯ ಕ್ರಾಂತಿಕಾರಕ ಹೆಜ್ಜೆಯಾಗಿದೆ. ನಾಡಿನ ಜನರಿಗೆ ಹಾಗೂ ರೈತರರಿಗೆ ವಿದ್ಯುತ್ ನೀಡುವ ಮೂಲಕ ಇಲಾಖೆ ರಾಜ್ಯದ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದೆ. ಗೃಹಜ್ಯೋತಿಯಡಿ ಗೃಹ ಬಳಕೆದಾರರಿಗೆ 200ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದು 1.65ಕೋಟಿ ಕುಟುಂಬಗಳಿಗೆ ಬೆಳಕಾಗಿದೆ. ಇಲಾಖೆಯಲ್ಲಿನ ಅವಕಾಶಗಳನ್ನು ಬಳಸಿಕೊಂಡು ನಾಡಿನ ರೈತರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು

ಸೌರಶಕ್ತಿಯನ್ನು ಕೃಷಿ ಚಟುವಟಿಕೆಗಳಿಗೆ ಸಂಯೋಜಿಸುವ ಮೂಲಕ ವಿದ್ಯುತ್ ಪರಿವರ್ತಕಗಳ ಮೇಲೆ ಬೀಳುತ್ತಿದ್ದ ಒತ್ತಡ ಹಾಗೂ ವಿದ್ಯುತ್ ಕಳ್ಳತನಗಳಿಗೆ ಕಡಿವಾಣ ಹಾಕಲಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ಪಗ್ರತಿ ಸಾಧಿಸಿದ್ದು, ವಿಶ್ವಾಸಾರ್ಹ ಪ್ರಸರಣವನ್ನು ಕಾಯ್ದುಕೊಂಡಿದ್ದೇವೆ ಎಂದು ಕೆ.ಜೆ.ಜಾರ್ಜ್ ಇದೇ ವೇಳೆ ಹೇಳಿದರು.

ತಲಾ ಆದಾಯದಲ್ಲಿ ನಂಬರ್ ಒನ್: ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ನೀಡಿದೆ. ಸರಕಾರ ಗ್ಯಾರಂಟಿಗಳಿಗೆ ಕಳೆದ ಸಾಲಿನಲ್ಲಿ 55ಸಾವಿರ ಕೋಟಿ ರೂ.ಮೀಸಲಿಟ್ಟಿದೆ. ಇದರಿಂದ ಮಾಸಿಕ ಪ್ರತಿ ಕುಟುಂಬಕ್ಕೆ 5 ಸಾವಿರ ರೂ.ಸಿಗುತ್ತಿದೆ. ಪ್ರತಿಯಾಗಿ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ದುರದೃಷ್ಟವಶಾತ್ ನಾವು ಕಟ್ಟುವ 4ಲಕ್ಷ ಕೋಟಿ ರೂ.ತೆರಿಗೆ ಹಣದಲ್ಲಿ ಕೇಂದ್ರ ಸರಕಾರ ಕೇವಲ 60 ಸಾವಿರ ಕೋಟಿ ರೂ.ಗಳನ್ನು ಮಾತ್ರ ರಾಜ್ಯಕ್ಕೆ ವಾಪಸ್ ನೀಡುತ್ತಿದೆ. ರಾಜ್ಯದ ಅಭಿವೃದ್ದಿಗೆ ಕೇಂದ್ರವೇ ಅಡ್ಡಗಾಲಾಗಿದೆ ಎಂದು ಅವರು ಆರೋಪಿಸಿದರು.

ಹುಸಿ ದೇಶಪ್ರೇಮ: ನೆಹರು ಶ್ರೀಮಂತ ಕುಟುಂಬದಿಂದ ಬಂದಿದ್ದರು. ಗಾಂಧಿ ಜತೆಗೆ ಜೈಲುವಾಸ ಅನುಭವಿಸಿದ್ದರು. ಬಿಜೆಪಿಯವರು ಯಾರೂ ದೇಶಕ್ಕಾಗಿ ಜೈಲು ಸೇರಿಲ್ಲ, ಹೋರಾಟವನ್ನೂ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ನೆಹರು ಪರಿಶ್ರಮ ಇವತ್ತು ಫಲಕೊಟ್ಟಿದೆ. ದೇಶ ಅಭಿವೃದ್ಧಿಯತ್ತ ದೃಢ ಹೆಜ್ಜೆಗಳನ್ನು ಇಡುತ್ತಿದೆ. ಈಗ ಅವರು ಹೋಗಿ ಸ್ವಿಚ್ ಆನ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಹೊತ್ತಲ್ಲಿ ಹೋಗಿ ಕೇವಲ ಭಾಷಣ ಬಿಗಿಯುತ್ತಾರೆ. ಕೇವಲ ಹುಸಿ ದೇಶಪ್ರೇಮದ ಪ್ರಚೋದನೆಯ ಮಾತುಗಳು ಅಷ್ಟೇ ಇವರ ಬಂಡವಾಳ ಎಂದು ಅವರು ಹರಿಹಾಯ್ದರು.

ಈ ವೇಳೆ ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷ ವಾಜೀದ್, ಕೇಂದ್ರ ವಿಭಾಗದ ಅಧ್ಯಕ್ಷ ನಂದಕುಮಾರ್, ಕೆಪಿಸಿಸಿ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ್ಯ, ಎಸ್.ಮನೋಹರ್, ಸರ್ವಜ್ಞನಗರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News