×
Ad

"ಕೆಲಸಕ್ಕೆ ನೆಪ ಹೇಳುವ ನಿಮಗೆ ನಾಚಿಕೆ ಆಗಲ್ಲವೇ?": ಕಂದಾಯ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತರಾಟೆ

Update: 2025-07-18 19:50 IST

ಬೆಂಗಳೂರು: ಕೆಲಸ ಮಾಡಿ, ಕಚೇರಿಗೆ ಹೋಗಿ ಎಂದರೆ ನೆಪ ಹೇಳುತ್ತೀರಾ. ನಿಮಗೆ ಈ ಬಗ್ಗೆ ನಾಚಿಕೆ ಆಗಲ್ಲವೇ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.

ಶುಕ್ರವಾರ ವಿಕಾಸಸೌಧದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಎಸಿ, ತಹಶೀಲ್ದಾರ್, ಉಪ ತಹಶೀಲ್ದಾರ್ ಗಳ ಸಭೆಯಲ್ಲಿ ಅಧಿಕಾರಿಗಳಿಗೆ ಮಾತಿನ ಮೂಲಕ ಚಾಟಿ ಬೀಸಿದ ಸಚಿವರು, ಭೂ ಸುರಕ್ಷಾ ಯೋಜನೆಯ ಅಡಿ ಭೂ ದಾಖಲೆಗಳು ಡಿಜಿಟಲೀಕರಣಗೊಳ್ಳುವ ಪ್ರಕ್ರಿಯೆ ಇಡೀ ರಾಜ್ಯದಲ್ಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳು ಕೆಟ್ಟ ದಾಖಲೆ ಹೊಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಭೂ ಸುರಕ್ಷಾ ಯೋಜನೆ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಆದರೆ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿದ್ದಾರೆ. ಆನ್‍ಲೈನ್ ಪ್ರಮಾಣೀಕೃತ ಪತ್ರ ಹಂಚಿಕೆ ವಿಚಾರವನ್ನು ತಹಶೀಲ್ದಾರರು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿದ್ದಾರೆ. ರಾಜ್ಯಾದ್ಯಂತ 21 ಲಕ್ಷ ಪುಟ ಹಂಚಿಕೆ ಆಗಿದ್ದರೆ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಕೇವಲ 27 ಪುಟ ಹಂಚಿಕೆ ಆಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಚಿವರು ತೀವ್ರ ಅಸಮಾಧಾನ ಹೊರಹಾಕಿದರು.

ಬೆಂಗಳೂರು ನಗರ, ಗ್ರಾಮೀಣ ಜಿಲ್ಲೆಯ ತಹಶೀಲ್ದಾರರು ಕಚೇರಿಗೆ ಹೋಗಲ್ಲ, ನಿಮಗೆ ಬೇರೆಲ್ಲಿ ಕಚೇರಿ ಇದೆ ಎಂಬುದೇ ನಮಗೆ ಗೊತ್ತಿಲ್ಲ. ಇಲ್ಲಿವರೆಗೆ ನಾನು ಸಹಿಸಿಕೊಂಡಿದ್ದೇನೆ. ಮುಂದೆ ಸಹಿಸಿಕೊಳ್ಳುವ ಮಾತೇ ಇಲ್ಲ. ಅಧಿಕಾರಿಗಳನ್ನು ದಾರಿಗೆ ಬರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಸಭೆಯಲ್ಲಿ ಮೌನವಾಗಿ ಇದ್ದ ಅಧಿಕಾರಿಗಳ ನಡೆಗೆ ಗರಂ ಆದ ಸಚಿವರು, ಮಾತನಾಡಲು, ಉತ್ತರಿಸಲು ಏನು ರೋಗ ಬಂದಿದೆ ನಿಮಗೆ?. ನಾಚಿಕೆ ಆಗಬೇಕು ನಿಮಗೆ, ಇಷ್ಟು ನೆಪಗಳನ್ನು ಹೇಳಲು. ಬಯೋಮೆಟ್ರಿಕ್ ಕೊಡಲು ಏನು ಸಮಸ್ಯೆ. ಕೆಲಸ ಆಗಬಾರದು ಎಂಬುವುದೇ ಇವರ ಉದ್ದೇಶ ಇರಬಹುದು ಎಂದು ಹೇಳಿದರು.

ತಮ್ಮ ವ್ಯಾಪ್ತಿಯಲ್ಲಿನ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವ ಮಾಹಿತಿ ತಹಶೀಲ್ದಾರ್‍ಗಳಿಗೇ ಗೊತ್ತಿಲ್ಲ ಎಂದರೆ ಏನರ್ಥ? ತಹಶೀಲ್ದಾರ್‍ಗೆ ಕೆಸಿಎಸ್‍ಆರ್ ನಿಯಮ ಗೊತ್ತಿಲ್ಲವೇ? ಯಾರ ಕಿವಿಗೆ ದಾಸವಾಳ ಹೂ ಇಡುವ ಪ್ರಯತ್ನ ಮಾಡುತ್ತೀದ್ದೀರಾ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜತೆಗೆ ಅನೇಕಲ್ ತಹಶೀಲ್ದಾರರ ವಿರುದ್ಧ ಇದೇ ಸಂದರ್ಭದಲ್ಲಿ ಕ್ರಮಕ್ಕೆ ಸೂಚಿಸಿದರು.

‘ಎ’ ಖಾತಾ ಸದುಪಯೋಗ ಪಡೆಯಿರಿ: ಕೃಷ್ಣಭೈರೇಗೌಡ

‘ಬಿ’ ಖಾತಾ ಹೊಂದಿರುವವರು ಅದನ್ನು ‘ಎ’ ಖಾತಾವಾಗಿ ಮಾರ್ಪಡಿಸಿಕೊಳ್ಳಲು ರಾಜ್ಯ ಸರಕಾರ ಅವಕಾಶ ಕಲ್ಪಿಸಿದ್ದು, ಇದನ್ನು ಅರ್ಹರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News