ಹೂಡಿಕೆದಾರರ ಸಮಸ್ಯೆ ಕ್ಷಿಪ್ರಗತಿಯಲ್ಲಿ ಬಗೆಹರಿಸಲು ಸೂಚನೆ: ಸಚಿವ ಎಂ.ಬಿ. ಪಾಟೀಲ್
Photo: X/@MBPatil
ಬೆಂಗಳೂರು: ರಾಜ್ಯದಲ್ಲಿ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಾ ಇಲಾಖೆಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ನಿರ್ದೇಶನ ನೀಡಿ, ವರದಿ ಕೊಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಇದನ್ನು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ, ಸೂಕ್ತ ಆದೇಶ ಹೊರಡಿಸಲಾಗುವುದು ಎಂದರು.
ಸಂಪುಟ ಸಭೆ ತೀರ್ಮಾನದಂತೆ ಪ್ರತಿಯೊಂದು ಕೈಗಾರಿಕಾ ಅನುಮೋದನೆಗಳಿಗೂ ಕಾಲಮಿತಿಯನ್ನು ನಿಗದಿ ಪಡಿಸಲಾಗುತ್ತದೆ. ಇದನ್ನು ಮೀರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ ಎಂದ ಅವರು, ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದಂತೆ ನೆರೆಹೊರೆಯ ತೆಲಂಗಾಣ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಯಾವ್ಯಾವ ಕೆಲಸಗಳಿಗೆ ಎಷ್ಟೆಷ್ಟು ದಿನಗಳಲ್ಲಿ ಒಪ್ಪಿಗೆ ಕೊಡಲಾಗುತ್ತಿದೆ ಎನ್ನುವುದನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ಚರ್ಚಿಸಿದರು ಎಂದು ತಿಳಿಸಿದರು.
ಮುಖ್ಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆಯಿಂದ ವಿಪರೀತ ವಿಳಂಬವಾಗುತ್ತಿದೆ ಎಂದು ಹೂಡಿಕೆದಾರರು ಹೇಳುತ್ತಿದ್ದಾರೆ. ಇದನ್ನು ತಪ್ಪಿಸಲು ಹೂಡಿಕೆದಾರರ ಸಮಾವೇಶದಲ್ಲಿ ಬಿಡುಗಡೆ ಮಾಡಿದ, ಮೈಕ್ರೋಸಾಫ್ಟ್ ಕಂಪೆಂನಿ ರೂಪಿಸಿರುವ ಅತ್ಯಾಧುನಿಕ ಏಕಗವಾಕ್ಷಿ ಪೋರ್ಟಲ್ ಅಡಿ 20 ಇಲಾಖೆಗಳ 115 ಸೇವೆಗಳನ್ನು ತರಲಾಗಿದೆ. ಆದರೆ ಮುದ್ರಾಂಕ ಮತ್ತು ನೋಂದಣಿ, ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆ, ಅಗ್ನಿಶಾಮಕ ಸೇವೆ, ಬಿಡಿಎ, ಕಂದಾಯ, ಔಷಧ ನಿಯಂತ್ರಣ ಮುಂತಾದ ಇಲಾಖೆಗಳ 29 ಸೇವೆಗಳು ಬಾಕಿ ಇವೆ. ಇವುಗಳನ್ನೂ ಶೀಘ್ರದಲ್ಲೇ ಏಕಗವಾಕ್ಷಿ ಅಡಿಗೆ ತರಬೇಕಾದ ತುರ್ತಿನ ಬಗ್ಗೆ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು.
ವಿಳಂಬಕ್ಕೆ ಶೀಘ್ರದಲ್ಲಿಯೇ ತೆರೆ:
‘ಕೈಗಾರಿಕಾ ರಂಗದಲ್ಲಿ ನಮಗೆ ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ ಮತ್ತು ಉತ್ತರಪ್ರದೇಶದಿಂದ ತೀವ್ರ ಸ್ಪರ್ಧೆ ಇದೆ. ಹೂಡಿಕೆದಾರರಿಗೆ ಸಮಯವೇ ಹಣವಿದ್ದಂತೆ. ನಾವು ಅನುಮೋದನೆ ಇತ್ಯಾದಿಗಳನ್ನು ವಿಳಂಬ ಮಾಡಿದರೆ ರಾಜ್ಯಕ್ಕೆ ನಷ್ಟವಾಗುತ್ತದೆ. ಇದಕ್ಕೆ ಶೀಘ್ರದಲ್ಲಿಯೇ ತೆರೆ ಎಳೆಯಲು ತೀರ್ಮಾನಿಸಲಾಗಿದೆ’
-ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ