ರಸ್ತೆ ಮೇಲೆ ಪ್ರಾರ್ಥನೆ ಮಾಡಲು ಅನುಮತಿ ಪಡೆಯಬೇಕು : ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು : ರಸ್ತೆ ಮೇಲೆ ಪ್ರಾರ್ಥನೆ ಮಾಡಲು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅರ್ಜಿ ಹಾಕಿ ಅನುಮತಿ ಪಡೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯಲ್ಲಿ ನಮಾಝ್ ಮಾಡಲು ಅವಕಾಶ ಕೊಡಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿಗೆ ಬರೆದಿರುವ ಪತ್ರದ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಈ ಸಂಬಂಧ ಇಂಗ್ಲಿಷ್‍ನಲ್ಲಿ ಯಾಕೆ ಪತ್ರ ಬರೆದರೋ ಗೊತ್ತಿಲ್ಲ. ಯಾರಿಗೆ ಸಂದೇಶ ಕೊಡಲು ಇಂಗ್ಲಿಷ್ ಬಳಸಿದ್ದಾರೋ? ಮುಖ್ಯಮಂತ್ರಿಯ ಗಮನ ಸೆಳೆಯಲೋ? ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಗೊತ್ತಾಗಲಿ ಎಂದು ಬರೆದರೋ ಗೊತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.
ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ ಎಂದು ಬಿಜೆಪಿ ಸಂಸದ ರಾಘವೇಂದ್ರ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕಪ್ಪ ಕೊಟ್ಟ ಮೇಲೆ ಮುಖ್ಯಮಂತ್ರಿ ಮಾಡಿದ್ದು’ ಎಂದು ಸ್ವತಃ ಯಡಿಯೂರಪ್ಪನವರು ಕೇಂದ್ರದ ಸಚಿವರಾಗಿದ್ದ ಅನಂತ್ ಕುಮಾರ್ ಜೊತೆ ವೇದಿಕೆ ಮೇಲೆ ಮಾತನಾಡಿದ್ದು ನೆನಪಿದೆಯೇ? ಎಂದು ತಿರುಗೇಟು ನೀಡಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಸರಿಯಾಗಿ ಕಪ್ಪ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳ ಬದಲಾವಣೆಯಾಯಿತೇ? ಹಿಂದಿನ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಣ್ಣೀರು ಹಾಕಿ ವೇದಿಕೆಯಿಂದ ಕೆಳಗೆ ಇಳಿದಿದ್ದು ಯಾಕೆ ಎಂದು ಈವರೆಗೂ ಯಾರಿಗೂ ಗೊತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರಲು ಆಗುತ್ತಿಲ್ಲ. ಕರ್ನಾಟಕದ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲು ಸಾಧ್ಯವಾಗದೆ, ನಮ್ಮ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಹಾರ ಚುನಾವಣೆಗೆ ಇಲ್ಲಿಂದ ಹಣ ಹೋಗುತ್ತಿದ್ದರೆ ದಾಖಲೆ ಕೊಡಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದಲ್ಲ. ಇವರು ಅಧಿಕಾರದಲ್ಲಿ ಇದ್ದಾಗ ಇದನ್ನೆ ಮಾಡಿದ್ರಾ? ಎಂದು ಅವರು ಪ್ರಶ್ನಿಸಿದರು.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಣ ಇಲಾಖೆಯಿಂದ ಶಾಲಾ-ಕಾಲೇಜುಗಳ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಹೊರತುಪಡಿಸಿ ಬೇರೆ ಯಾವುದಕ್ಕೂ ಅವಕಾಶ ನೀಡಬಾರದು ಎಂದು ಆದೇಶ ಹೊರಡಿಸಲಾಗಿತ್ತು. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದರೆ ಹೇಗೆ? ಮುಖ್ಯಮಂತ್ರಿ ಅಂದರೆ ಕೇವಲ ಆರ್ಥಿಕ ಇಲಾಖೆಗೆ ಸೀಮಿತವೇ? ಎಂದು ಅವರು ಪ್ರಶ್ನಿಸಿದರು.
ನಮ್ಮ ಸರಕಾರ ಹೊರಡಿಸಿರುವ ಆದೇಶದಲ್ಲಿ ಎಲ್ಲಿಯೂ ಯಾವುದೆ ಸಂಘ ಸಂಸ್ಥೆಗಳ ಹೆಸರನ್ನು ಉಲ್ಲೇಖಿಸಿಲ್ಲ. ಇವರಿಗೆ ಯಾಕೆ ಅನುಮಾನ?. ನಿಮ್ಮ ಸಂಘಟನೆಯ ಒಬ್ಬ ವ್ಯಕ್ತಿ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಾನೆ, ಬಿಜೆಪಿಯ ಒಬ್ಬ ನಾಯಕರು ಅದನ್ನು ಖಂಡಿಸುವುದಿಲ್ಲ. ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯ ಮೇಲೆ ಶೂ ಎಸೆದಿರುವ ಘಟನೆಯನ್ನು ಖಂಡಿಸುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಚಿತ್ತಾಪುರದಲ್ಲಿ ಪಥ ಸಂಚಲನ ನಡೆಸಲು ಅನುಮತಿ ಕೋರಿ ಮತ್ತೊಮ್ಮೆ ಅರ್ಜಿ ಹಾಕಿ, ಸ್ಥಳೀಯವಾಗಿ ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತಾರೆ ಎಂದು ಹೈಕೋರ್ಟ್ ಹೇಳಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸರಕಾರ ತನ್ನ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಆರೆಸ್ಸೆಸ್ ವಿಷಯವನ್ನು ಮುನ್ನೆಲೆಗೆ ತಂದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಾಜದಲ್ಲಿ ಆರೆಸ್ಸೆಸ್ ನಂತಹ ವಿಷಜಂತುಗಳನ್ನು ಬೆಳೆಸಬಾರದು ಎಂದು ದಿನಪತ್ರಿಕೆಯೊಂದರಲ್ಲಿ ಕುಮಾರಸ್ವಾಮಿ ಲೇಖನ ಬರೆದಿದ್ದರು. ಆರೆಸ್ಸೆಸ್ ಶಾಖೆಗಳಲ್ಲಿ ಏನು ಕಲಿಸುತ್ತಾರೆ ಎಂದು ಕುಮಾರಸ್ವಾಮಿ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಸ್ಮರಿಸಿಕೊಳ್ಳಲಿ ಎಂದು ಹೇಳಿದರು.
ಆರೆಸ್ಸೆಸ್ ಹಾಗು ಎಬಿವಿಪಿಯನ್ನು ನಿಷೇಧಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಗ್ರಹಿಸಿದ್ದರು. ಇವತ್ತು ಕುರ್ಚಿಗಾಗಿ ಸಿದ್ಧಾಂತಗಳನ್ನು ಬದಲಾಯಿಸಿಕೊಂಡಿದ್ದಾರೆ. ಜೆಡಿಎಸ್ ಈಗ ಜಾತ್ಯತೀತ ಅಲ್ಲ, ಕೇಸರಿಕರಣಗೊಂಡಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.
ಕಾಂಗ್ರೆಸ್ ಪಕ್ಷದಲ್ಲಿನ ಕುಟುಂಬ ರಾಜಕಾರಣದ ಕುರಿತು ಟೀಕಿಸಿರುವ ಸುನಿಲ್ ಕುಮಾರ್ ವಿರುದ್ಧ ಕಿಡಿಗಾರಿರುವ ಅವರು, ಸುನಿಲ್ ಕುಮಾರ್ ತಮ್ಮ ಮಗನಿಗೆ ಒಂದು ದಿನ ಗಣವೇಷ ಹಾಕಿದರೆ ಸಾಕಾಗುವುದಿಲ್ಲ. ತ್ರಿಶೂಲ ಧೀಕ್ಷೆ ಕೊಡಿಸಲಿ, ರಾತ್ರಿ ಗೋ ರಕ್ಷಣೆಗೆ ಕಳುಹಿಸಲಿ, ಶಾಲಾ, ಕಾಲೇಜು ಬಿಡಿಸಿ ಪೂರ್ಣ ಪ್ರಮಾಣದಲ್ಲಿ ಶಾಖೆಯಲ್ಲಿ ಕೆಲಸ ಮಾಡಲು ಅವಕಾಶ ಕೊಡಿಸಲಿ ಎಂದು ಹೇಳಿದರು.