×
Ad

‘ಶಕ್ತಿ’ ಯೋಜನೆ ಸಾರಿಗೆ ಸಂಸ್ಥೆಗಳಿಗೆ ಹೊರೆಯಲ್ಲ : ಸಚಿವ ರಾಮಲಿಂಗಾರೆಡ್ಡಿ

Update: 2024-07-24 20:24 IST

ಬೆAಗಳೂರು : ಬಜೆಟ್‌ನಲ್ಲಿ ಅನುದಾನದ ಲಭ್ಯತೆ ಇರುವುದರಿಂದ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ ಸಾರಿಗೆ ಸಂಸ್ಥೆಗಳಿಗೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನವಿದೆ. ಈ ಹಣಕಾಸಿನ ಲಭ್ಯತೆ ಮೇಲೆ ನಾವು ಸಾರಿಗೆ ನಿಗಮಗಳಿಗೆ ಹಣವನ್ನು ನೀಡುತ್ತೇವೆ. ಹೀಗಾಗಿ ಯಾವುದೇ ಸಂಸ್ಥೆಗೂ ಹೊರೆಯಾಗುವುದಿಲ್ಲ ಎಂದರು.

ಕರ್ನಾಟಕ ವಾಹನ ತೆರಿಗೆ ಕಾಯಿದೆಗೆ ವಿನಾಯಿತಿ ನೀಡಿದ್ದರಿಂದ ನನಗೆ 600 ಕೋಟಿ ರೂ.ಹೆಚ್ಚುವರಿ ಅನುದಾನ ಸಿಗಲಿದೆ. ಅಲ್ಲದೆ, ಬಸ್ ಖರೀದಿ ಮಾಡಲು 580ಕೋಟಿ ರೂ.ಅನುದಾನವೂ ಸಿಗಲಿದೆ. ಸಂಸ್ಥೆಯು ಈಗ ಸುಧಾರಣೆಯತ್ತ ಸಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದರು.

ಸಾರಿಗೆ ನಿಗಮಗಳಿಗೆ ಲಾಭವಾಗುತ್ತಿದೆ. ಬಿಎಂಟಿಸಿ 10 ವರ್ಷದಿಂದ ಟಿಕೆಟ್ ದರ ಹೆಚ್ಚಿಸಿಲ್ಲ. ‘ಶಕ್ತಿ’ ಯೋಜನೆ ಜಾರಿ ನಂತರ ಆದಾಯ ಹೆಚ್ಚಾದರೂ ನಿರ್ವಹಣೆ, ಡೀಸೆಲ್, ವೇತನದ ಕಾರಣಕ್ಕೆ ಲಾಭ ತೋರಿಸಲಾಗುತ್ತಿಲ್ಲ. 2020ರಲ್ಲಿ ಉಳಿದ ಮೂರು ಸಾರಿಗೆ ನಿಗಮಗಳಿಂದ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಈ ಮೊದಲು ನೌಕರರಿಗೆ ನಿಗಮದಲ್ಲಿ ವೇತನ ನೀಡಲು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ಇತ್ತು. ಈಗ ಸಾಕಷ್ಟು ಸುಧಾರಣೆಯಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

2024ರ ಜೂನ್‌ವರೆಗೆ ‘ಶಕ್ತಿ’ ಯೋಜನೆಯಡಿ 4,453.50 ಕೋಟಿ ರೂ. ಬಿಡುಗಡೆ ಮಾಡಿದ್ದು 1,413.47 ಕೋಟಿ ರೂ. ಬಾಕಿ ಇದೆ. ಯೋಜನೆಗೆ 5,015 ಕೋಟಿ ರೂ. ಹಣವನ್ನು ಈ ಬಾರಿ ಬಜೆಟ್‌ನಲ್ಲಿ ಇಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News