ಬೆಂಗಳೂರು : ಶ್ರೀಗಂಧ ಬೆಳೆಯನ್ನು ತೋಟಗಾರಿಕೆ ಬೆಳೆಯೆಂದು ಗುರುತಿಸಿ, ಏಕಗವಾಕ್ಷಿ ವ್ಯವಸ್ಥೆಯಡಿ ಬೆಳೆಗಾರರಿಗೆ ಪ್ರೋತ್ಸಾಹ ಒದಗಿಸಲು ಕ್ರಮವಹಿಸಲಾಗುವುದು. ರಾಜ್ಯದ ಕಾನೂನು ಪರಿಷ್ಕರಣೆ ಜತೆಗೆ ಭಾರತೀಯ ಅರಣ್ಯ ಕಾಯ್ದೆ-1927ಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

ರವಿವಾರ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘವು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥ ಆಯೋಜಿಸಿದ್ದ ‘ರಾಷ್ಟ್ರೀಯ ಶ್ರೀಗಂಧ ಸಮಾವೇಶದಲ್ಲಿ ಸಂಘದ ಬೇಡಿಕೆಗಳ ಮನವಿ ಸ್ವೀಕರಿಸಿ ಸಚಿವರು ಮಾತನಾಡಿದರು.

ಶ್ರೀಗಂಧ ಬೆಳೆಗಾರರಿಗೆ ಬ್ಯಾಂಕ್ ಸಾಲ, ವಿಮಾ ಸೌಲಭ್ಯ, ತರಬೇತಿ ಕಲ್ಪಿಸುವುದು, ಮಾರಾಟದಲ್ಲಿ ರೈತರಿಗೆ ಸ್ವಾತಂತ್ರ್ಯ ಹಾಗೂ ಮಾರುಕಟ್ಟೆ ಬೆಲೆ ನಿಗದಿಪಡಿಸುವ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಶ್ರೀಗಂಧ ಮರಗಳಿಗೆ ಮೌಲ್ಯಮಾಪನ ಮತ್ತು ದರ ನಿಗದಿ ಮಾಡಲಾಗುವುದು. ಜತೆಗೆ ಮರಗಳಿಗೆ ಜಿಯೋ ಟ್ಯಾಪಿಂಗ್ ಅಳವಡಿಸುವುದು ಹಾಗೂ ರಾಜ್ಯದ ಬೆಳೆಗಾರರು, ಬೆಳೆಯುವ ಪ್ರದೇಶ ಮತ್ತು ಜಮೀನಿನ ಮಾಲಕರ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಶ್ರೀಗಂಧ ಕಳ್ಳತನ ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಜಂಟಿ ಸಭೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ಗೃಹ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಗಿದೆ. ಅಗತ್ಯ ಬದಲಾವಣೆ ಅಥವಾ ಸೇರ್ಪಡೆಗಳನ್ನು ಶೀಘ್ರದಲ್ಲೇ ಮಾಡಿಕೊಡಲಾಗುವುದು. ಮುಖ್ಯಮಂತ್ರಿಗಳಿಗೂ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಇದ್ದು, ಬೆಳೆ ಮತ್ತು ಮಾರಾಟಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಕಾನೂನು ಮತ್ತು ನಿಯಮಗಳಲ್ಲಿ ಶೀಘ್ರ ಬದಲಾವಣೆ ತರಲಾಗುವುದು ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ರಾಜ್ಯ ವೃಕ್ಷ ವಾಗಿರುವ ಶ್ರೀಗಂಧದ ಸಂರಕ್ಷಣೆ ಹಾಗೂ ಬೆಳೆಗಾರರ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಮನ್ವಯದೊಂದಿಗೆ ಶ್ರೀಗಂಧ ಬೆಳೆಗೆ ಹೊಸ ಚೌಕಟ್ಟು ರೂಪಿಸುವ ಅಗತ್ಯವಿದ್ದು, ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಕೇಂದ್ರ ಹಣಕಾಸು ಸಚಿವರು ಮಂಡಿಸಿದ 2026-27ನೇ ಸಾಲಿನ ಬಜೆಟ್‍ನಲ್ಲಿ ವಾಣಿಜ್ಯ ಬೆಳೆಗಳ ಉತ್ತೇಜನಕ್ಕಾಗಿ ಸುಮಾರು 350 ಕೋಟಿ ಹಣ ಮೀಸಲಿಡಲಾಗಿದೆ. ಶ್ರೀಗಂಧ ಬೆಳೆಗಾರರು ಈ ಯೋಜನೆಯಡಿ ಉತ್ತಮ ಬೀಜ, ರಸಗೊಬ್ಬರ, ಭೂಮಿಯ ಫಲವತ್ತತೆ ಹೆಚ್ಚಳ ಹಾಗೂ ಕೊಯ್ಲಿನ ನಂತರದ ಸಂಸ್ಕರಣೆಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದರೆ ಅಗತ್ಯ ನೆರವು ಕೊಡಿಸಲಾಗುವುದು ಎಂದು ಯದುವೀರ್ ಒಡೆಯರ್ ತಿಳಿಸಿದರು.

ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೈತರ ನೈಜ ಸಂಕಷ್ಟಗಳನ್ನು ಅರಿಯಲು ವೈದ್ಯಕೀಯ ಇಂಟರ್ನ್‍ಶಿಪ್ ಮಾದರಿಯಲ್ಲಿ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳಿಗೆ ಕನಿಷ್ಠ ಒಂದು ವರ್ಷದ ಗ್ರಾಮ ವಾಸ್ತವ್ಯ ಕಡ್ಡಾಯವಾಗಬೇಕು; ಆಡಳಿತದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಸೂಕ್ತ ಕಾನೂನು ತಿದ್ದುಪಡಿಗಳ ಮೂಲಕ ಅನ್ನದಾತನ ಹಿತ ಕಾಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ಅಮರನಾರಯಣ ಅವರು ಶ್ರೀಗಂಧ ರೈತರ ಹಿತದೃಷ್ಠಿಯಿಂದ 18 ಬೇಡಿಕೆಗಳನ್ನು ಮಂಡಿಸಿದರು. ಸಮಾವೇಶ ಉದ್ಘಾಟಿಸಿದ ಐಎಫ್‍ಇಎಟಿ ಅಧ್ಯಕ್ಷ ಗೀಮೊನ್ ಕೋರಾ ಅವರ ‘ಶ್ರೀಗಂಧದ ಎಣ್ಣೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ’ ಹಾಗೂ ಸಂಘದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಇದೇ ವೇಳೆ, ಪ್ರಗತಿಪರ ಕೃಷಿಕರಾದ ಅರಕಲಗೂಡು ತಾಲೂಕಿನ ಡಾ.ಎಂ.ಸಿ.ರಂಗಸ್ವಾಮಿ, ಚಿತ್ರದುರ್ಗದ ಕೆ.ಸಿ.ದಿನೇಶ್, ಕುಷ್ಟಗಿಯ ರಮೇಶ್ ದೇವೆಂದ್ರಪ್ಪ ಬಳೂಟಗಿ, ದೇವನಹಳ್ಳಿಯ ವಿಷ್ಣುಪ್ರಿಯಾ ಜಿ, ಚಿಕ್ಕಮಗಳೂರಿನ ಶ್ರೀಗಂಧದ ಕೃಷ್ಣೇಗೌಡ, ಎಸ್.ಆರ್.ಅಶೋಕ್ ರೆಡ್ಡಿ, ಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ವಿಶ್ವ ಒಕ್ಕಲಿಗರ ಮಠ, ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಬೆಂಗಳೂರು ನಗರ ವಿವಿ ಕುಲಪತಿ ಡಾ.ಬಿ.ರಮೇಶ್, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

‘ಎಸ್.ಎಂ.ಕೃಷ್ಣ ಹೆಸರಲ್ಲಿ ಶ್ರೀಗಂಧ ಸಂಬಂಧಿತ ಮಂಡಳಿ ರಚನೆಗೆ ಕ್ಯಾಬಿನೆಟ್‍ನಲ್ಲಿ ಚರ್ಚೆ’

ಶ್ರೀಗಂಧದ ಮಾರಾಟ ಮತ್ತು ಸಾಗಾಣಿಕೆಗಿರುವ ಅಡೆತಡೆ ನಿವಾರಿಸಲು ರಾಜ್ಯ ಸರಕಾರ ಬದ್ಧವಾಗಿದ್ದು, ಶ್ರೀಗಂಧ ಅಭಿವೃದ್ಧಿ ಸಮಿತಿಯ ಶಿಫಾರಸಿನಂತೆ ಶ್ರೀಗಂಧವನ್ನು ಕೃಷಿ ಉತ್ಪನ್ನವಾಗಿ ಪರಿಗಣಿಸಲಾಗುವುದು. ರಾಷ್ಟ್ರ ಮಟ್ಟದಲ್ಲಿ ಸ್ಯಾಂಡಲ್‍ವುಡ್ ಬೋರ್ಡ್ ಆಫ್ ಇಂಡಿಯಾ ಸ್ಥಾಪಿಸಲು ಶಿಫಾರಸು ಮಾಡುವ ಜತೆಗೆ, ರಾಜ್ಯದಲ್ಲಿ ಶ್ರೀಗಂಧಕ್ಕೆ ಸಂಬಂಧಿಸಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೆಸರಲ್ಲಿ ಮಂಡಳಿ ರಚಿಸುವ ವಿಷಯವನ್ನು ಕ್ಯಾಬಿನೆಟ್‍ನಲ್ಲಿ ಮಂಡಿಸಿ ಚರ್ಚಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಲ್ಲೂರು/ವಾರ್ತಾಭಾರತಿ

contributor

ಯೋಗೇಶ್ ಮಲ್ಲೂರು ಅವರು ವಾರ್ತಾಭಾರತಿ ದಿನಪತ್ರಿಕೆಯ ಬೆಂಗಳೂರು ಬ್ಯೂರೋದಲ್ಲಿ ವರದಿಗಾರ/ಉಪಸಂಪಾದಕ. ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಲ್ಲೂರಿನವರಾದ ಯೋಗೇಶ್, ತುಮಕೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ಇವರು ಹಲವು ದಿನಪತ್ರಿಕೆಗಳು ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಒಟ್ಟಾರೆ, ಪತ್ರಿಕೋದ್ಯಮ ವಲಯದಲ್ಲಿ ಬೆಂಗಳೂರು, ತುಮಕೂರಿನಲ್ಲಿ ಯೋಗೇಶ್ ಅವರಿಗೆ 7 ವರ್ಷಗಳ ಅನುಭವವಿದೆ.