×
Ad

"ನನಗೆ ಬಡವರಿಂದ ಹಣ ಪಡೆಯುವ ದಾರಿದ್ರ್ಯ ಬಂದಿಲ್ಲ": ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಝಮೀರ್ ಅಹ್ಮದ್ ಪ್ರತಿಕ್ರಿಯೆ

Update: 2025-06-24 14:15 IST

ಬೆಂಗಳೂರು: ಬಡವರಿಗೆ ಕೊಡುವ ಮನೆಗೆ ಹಣ ಪಡೆದು ಬದುಕುವಂತಹ ದ್ರಾರಿದ್ರ್ಯ ನನಗೆ ಬಂದಿಲ್ಲ. ಮನೆಗಳನ್ನು ಹಂಚಿಕೆ ಮಾಡಲು ನಾನು ಹಣ ಪಡೆದಿರುವುದು ಸಾಬೀತು ಮಾಡಿದರೆ ಬೇರೆಯವರು ಕೇಳುವುದು ಬೇಡ ನಾನೇ ಸ್ವಯಂ ಪ್ರೇರಿತವಾಗಿ ರಾಜೀನಾಮೆ ಕೊಡಲು ಸಿದ್ಧ ಎಂದು ವಸತಿ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.

ಮಂಗಳವಾರ ನಗರದಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲ ಬಾರಿ ಶಾಸಕನಾದಗಲೇ ಸಚಿವ ಸ್ಥಾನ ಸಿಕ್ಕಿತ್ತು. ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ನನ್ನ ಒಂದು ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವನು ನಾನು. ಅಧಿಕಾರಕ್ಕೆ ಅಂಟಿಕೊಂಡು ಕೂರುವ ಜಾಯಮಾನ ನನ್ನದಲ್ಲ ಎಂದು ತಿಳಿಸಿದರು.

ಬಡವರ ಮನೆಗೆ ಹಣ ಪಡೆಯುವುದು ಅಕ್ಷಮ್ಯ ಅಪರಾಧ. ಅದಕ್ಕೆ ನಮ್ಮ ಇಲಾಖೆಯಲ್ಲಿ ಅವಕಾಶ ಇಲ್ಲ. ಶಾಸಕ ಬಿ.ಆರ್.ಪಾಟೀಲ್ ತುಂಬಾ ಹಿರಿಯರು. ಬಡವರ ಬಗ್ಗೆ ಕಾಳಜಿ ಇರುವವರು. ಯಾವ ಅರ್ಥದಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ಗೊತ್ತಿಲ್ಲ. ನಾನು ಹಣ ಪಡೆದಿರುವುದಾಗಿ ಅವರು ಹೇಳಿದ್ದಾರಾ? ಅವರ ಆಡಿಯೋದಲ್ಲಿ ಮಿನಿಸ್ಟರ್ ಅಂತ ಹೇಳಿದ್ದಾರಾ? ಯಾರು ಹಣ ಪಡೆದವರು ಎಂದು ನಿರ್ದಿಷ್ಟವಾಗಿ ಹೇಳಬೇಕು ತಾನೇ? ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಬಿ.ಆರ್.ಪಾಟೀಲ್ ಆರೋಪದಲ್ಲಿ ಏನಾದರೂ ಸ್ಪಷ್ಟತೆ ಇದೆಯಾ? ಯಾವ ಅಧಿಕಾರಿ ಹಣ ಕೇಳಿದ ಎಂಬುದರ ಬಗ್ಗೆಯೂ ಹೇಳಿಲ್ಲ. ಪಂಚಾಯತಿಯಲ್ಲಿ ಯಾರಾದರೂ ಹಣ ಪಡೆದಿದ್ದರೆ ಮಾಹಿತಿ ಕೊಡಲಿ. ಈ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಾಗುವುದು. ತನಿಖೆಯಲ್ಲಿ ಯಾರಾದರೂ ತಪ್ಪು ಮಾಡಿರುವುದು ಸಾಬೀತಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ವಿಚಾರದ ಬಗ್ಗೆ ಎಲ್ಲ ಮಾಹಿತಿ ತಿಳಿಸಿದ್ದೇನೆ. ನಾನು ಪ್ರವಾಸದಲ್ಲಿದ್ದ ಕಾರಣ ಬಿ.ಆರ್.ಪಾಟೀಲ್ ಅವರೊಂದಿಗೆ ಮಾತನಾಡಲು ಆಗಲಿಲ್ಲ. ಈ ಬಗ್ಗೆ ಅವರ ಜೊತೆ ಚರ್ಚೆ ಮಾಡುತ್ತೇನೆ. ಮನೆಗಳ ಹಂಚಿಕೆ ಸಂಬಂಧ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ನಾನು ವಸತಿ ಸಚಿವನಾದ ನಂತರ ಬಡವರಿಗೆ 36 ಸಾವಿರ ಮನೆಗಳನ್ನು ನೀಡಿದ್ದೇನೆ. ಬಿಜೆಪಿ, ಜೆಡಿಎಸ್‍ನವರು ಒಂದು ಮನೆ ಕೊಟ್ಟಿದ್ದಾರಾ? ಕೊಟ್ಟಿದ್ದರೆ ಹೇಳಲಿ. ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಮೂರು ಹಂತಗಳಲ್ಲಿ ನಾವು ಮನೆಗಳನ್ನು ನೀಡುತ್ತಿದ್ದೇವೆ. ಶಾಸಕರ ಒತ್ತಡದಿಂದಾಗಿ ಬಡವರ ಮನೆಗಳಿಗೆ ನೀಡುತ್ತಿದ್ದ ಸಹಾಯಧನದ ಮೊತ್ತವನ್ನು 1.20 ಲಕ್ಷ ರೂ.ಗಳಿಂದ 3.50 ಲಕ್ಷ ರೂ.ಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿ ಸಹಮತಿ ನೀಡಿದರು ಎಂದು ಅವರು ತಿಳಿಸಿದರು.

ಆಳಂದ ಕ್ಷೇತ್ರಕ್ಕೆ ಬಿ.ಆರ್.ಪಾಟೀಲ್ ಅವರ ಪತ್ರದ ಆಧಾರದಲ್ಲೇ 950 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಹಿಂದೆ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 14 ಲಕ್ಷ ಮನೆ ಕೊಟ್ಟಿದ್ದರು. ನಂತರ ಬಂದ ಸಮ್ಮಿಶ್ರ ಸರಕಾರ 5.8 ಲಕ್ಷ ಮನೆಗಳನ್ನು ನೀಡಿದೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ವಾ? ಎಂದು ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

ರಾಜೀವ್ ಗಾಂಧಿ ವಸತಿ ನಿಗಮದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಝಮೀರ್ ಅಹ್ಮದ್ ರಾಜೀನಾಮೆ ನೀಡಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇಳೂರು ಗೋಪಾಲಕೃಷ್ಣ ಅವರಿಗೆ ವಾಸ್ತವ ಪರಿಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ಮನೆ ಹಂಚಿಕೆ ವಿಚಾರದಲ್ಲಿ ಸಚಿವರ ಪಾತ್ರವೇ ಇರುವುದಿಲ್ಲ. ಫಲಾನುಭವಿಗಳ ಆಯ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತದೆ. ಶಾಸಕರ ಪತ್ರದ ಆಧಾರದಲ್ಲಿ ಮನೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News