ಬ್ರಿಟಿಷರ ದಮನಕಾರಿ ನೀತಿಯನ್ನೇ ಅನುಸರಿಸುತ್ತಿರುವ ಮೋದಿ ಸರಕಾರ: ಬಿ.ಕೆ. ಹರಿಪ್ರಸಾದ್ ವಾಗ್ದಾಳಿ
"ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆಯುತ್ತಿದ್ದ ಬಿಜೆಪಿಯವರು ನಮಗೆ ದೇಶ ಭಕ್ತಿಯ ಪ್ರಮಾಣಪತ್ರ ನೀಡಲು ಬರುತ್ತಿದ್ದಾರೆ"
ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರು ಕಾಂಗ್ರೆಸ್ ನಾಯಕರ ವಿರುದ್ಧ ಅನುಸರಿಸಿದ್ದ ದಮನಕಾರಿ ನೀತಿಯನ್ನೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರಗಳನ್ನು ಬರೆಯುತ್ತಿದ್ದ ಬಿಜೆಪಿಯವರು ನಮಗೆ ದೇಶ ಭಕ್ತಿ, ದೇಶ ಪ್ರೇಮದ ಪ್ರಮಾಣಪತ್ರ ನೀಡಲು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಶ್ರಮಿಸಿದ ಮಹಾನ್ ಪಕ್ಷಕ್ಕೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದು ಮೋದಿ ಹೇಳುತ್ತಿದ್ದಾರೆ. ಈ.ಡಿ, ಸಿಬಿಐ, ಐಟಿ ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನು ದಮನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಂವಿಧಾನ, ತ್ರಿವರ್ಣಧ್ವಜ, ಪ್ರಜಾಪ್ರಭುತ್ವವನ್ನು ಒಪ್ಪದ ಈ ಬಿಜೆಪಿ, ಆರೆಸ್ಸೆಸ್‍ನವರು ಹಿಂಬಾಗಿಲಿನಿಂದ ಬಂದು ತ್ರಿವರ್ಣ ಧ್ವಜದ ಬದಲು ತಮ್ಮ ಧ್ವಜ ಹಾಕಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರಾದ ಮಹಾತ್ಮ ಗಾಂಧಿ, ಪಂಡಿತ್ ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನ ಅಬುಲ್ ಕಲಾಂ ಆಝಾದ್, ಸುಭಾಶ್ ಚಂದ್ರ ಬೋಸ್ ಸೇರಿದಂತೆ ಅನೇಕ ಮಹನೀಯರು ನಮಗೆ ಬಳುವಳಿಯಾಗಿ ನೀಡಿರುವ ಈ ಸ್ವಾತಂತ್ರ್ಯವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಮೇಲಿದೆ ಎಂದು ಅವರು ಹೇಳಿದರು.
1942ರ ಆ.8ರಂದು ಮುಂಬೈನ ಆಝಾದ್ ಮೈದಾನದಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ʼಬ್ರಿಟಿಷರೆ ಭಾರತ ಬಿಟ್ಟು ತೊಲಗಬೇಕುʼ ಎಂಬ ನಿರ್ಣಯ ಕೈಗೊಳ್ಳಲಾಯಿತು. ಸಂಪೂರ್ಣ ಸ್ವರಾಜ್ಯ ಪಡೆಯಲು ಮಾಡು ಇಲ್ಲವೆ, ಮಡಿ ಎಂಬ ಘೋಷಣೆಯೊಂದಿಗೆ ಹೋರಾಟಕ್ಕೆ ಮುನ್ನಡಿ ಬರೆಯಲಾಯಿತು ಎಂದು ಹರಿಪ್ರಸಾದ್ ತಿಳಿಸಿದರು.
ಗಾಂಧಿ, ನೆಹರು, ಆಝಾದ್, ಪಟೇಲ್ ಸೇರಿದಂತೆ ದೇಶದಾದ್ಯಂತ ಕಾಂಗ್ರೆಸ್ ನಾಯಕರನ್ನು ಬಂಧನ ಮಾಡಿ, ಕಾಂಗ್ರೆಸ್ ಕಚೇರಿಗಳನ್ನು ಜಪ್ತಿ ಮಾಡಲಾಯಿತು. ಆಂದೋಲನಕ್ಕೆ ಅವಕಾಶ ಇಲ್ಲದಂತೆ ಮಾಡಿದಾಗ ಜಯಪ್ರಕಾಶ್ ನಾರಾಯಣ್, ರಾಮಮನೋಹರ್ ಲೋಹಿಯಾ, ಅರುಣಾ ಆಸಿಫ್ ಅಲಿ ಕ್ರಾಂತಿ ಮೈದಾನದಲ್ಲಿ ಧ್ವಜ ಹಾರಿಸಿ ಹೋರಾಟ ಕಿಚ್ಚು ಹಚ್ಚಿದರು ಎಂದು ಅವರು ತಿಳಿಸಿದರು.
ನಮಗೆ ದೇಶ ಭಕ್ತಿ, ದೇಶ ಪ್ರೇಮದ ಪ್ರಮಾಣ ಪತ್ರ ನೀಡಲು ಬರುತ್ತಿರುವವರ ನಾಯಕ ಹಿಂದೂ ಮಹಾಸಭಾದ ಸಾವರ್ಕರ್, ಶಾಮಪ್ರಸಾದ್ ಮುಖರ್ಜಿ ಬ್ರಿಟಿಷರಿಗೆ ಪತ್ರ ಬರೆದು ಈ ಆಂದೋಲನ ಯಶಸ್ವಿಯಾಗಲು ಬಿಡಬೇಡಿ ಎಂದು ಕೋರಿದ್ದರು. ಗ್ವಾಲಿಯರ್ ನ ಭಕ್ತೇಶ್ವರ ಎಂಬ ಊರಿನಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಮ್ಯಾಜಿಸ್ಟ್ರೇಟ್ ಎದುರು ಕ್ಷಮಾಪಣೆ ಪತ್ರ ಬರೆದು ಬಿಡುಗಡೆ ಹೊಂದಿದವರು ಎಂದು ಹರಿಪ್ರಸಾದ್ ಹೇಳಿದರು.
ಮಹಾತ್ಮ ಗಾಂಧಿ ನೇತೃತ್ವದಲ್ಲಿ 1917ರಲ್ಲಿ ಚಂಪಾರನ್ ಸತ್ಯಾಗ್ರಹ, 1919ರಲ್ಲಿ ನಡೆದ ಅಸಹಕಾರ ಚಳವಳಿ ಹಾಗೂ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಡೆದ ಬಹುದೊಡ್ಡ ಮಹತ್ವದ ಹೋರಾಟಗಳು ಎಂದು ಹರಿಪ್ರಸಾದ್ ಸ್ಮರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಸಚಿವ ಕೆ.ಎಚ್.ಮುನಿಯಪ್ಪ, ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಸಂದೀಪ್, ಮಾಜಿ ಸಚಿವರಾದ ರಾಣಿ ಸತೀಶ್, ಬಿ.ಟಿ.ಲಲಿತಾ ನಾಯಕ್, ಪರಿಷತ್ ಸದಸ್ಯ ನಾಗರಾಜ ಯಾದವ್, ಪರಿಷತ್ ಮಾಜಿ ಸದಸ್ಯೆ ಜಲಜಾ ನಾಯಕ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಉಪಸ್ಥಿತರಿದ್ದರು.