ರಾಸಾಯನಿಕ ಮಿಶ್ರಿತ ಸೇಂದಿ ಮಾರಾಟ ; ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆ : ಅಬಕಾರಿ ಸಚಿವ ತಿಮ್ಮಾಪೂರ್ ಎಚ್ಚರಿಕೆ
ಬೆಂಗಳೂರು, ಆ. 12: ಅಪಾಯಕಾರಿ ರಾಸಾಯನಿಕ ‘ಕ್ಲೋರಲ್ ಹೈಡ್ರೇಟ್’ ಮಿಶ್ರಿತ ಸೇಂದಿ(ಮದ್ಯ) ಯನ್ನು ರಾಜ್ಯದ ಗಡಿ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿರುವ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಬಳಕೆ ಮಾಡಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯೆ ಅನ್ನಪೂರ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನೆರೆಯ ಆಂಧ್ರದ ಅನಂತಪುರ, ಕರ್ನೂಲ್‍ನಿಂದ ಅಕ್ರಮವಾಗಿ ಸೇಂದಿಯನ್ನು ರಾಜ್ಯದ ಗಡಿ ಜಿಲ್ಲೆಗಳಿಗೆ ತರಲಾಗುತ್ತಿದೆ ಎಂಬುದು ಸರಕಾರದ ಗಮನಕ್ಕೆ ಬಂದಿದೆ. ಇದಕ್ಕೆ ಸಿಎಚ್ ಎಂಬ ಪೌಡರನ್ನು ಸೇಂದಿಗೆ ಮಿಶ್ರಣ ಮಾಡಿ ತಯಾರಿಸಲಾಗುತ್ತಿದೆ. ಇದರ ವಿರುದ್ಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನ ಜಾಗೃತಿ ಮಾಡುತ್ತಿದ್ದೇವೆ ಎಂದರು.
ಈವರೆಗೂ ಅಕ್ರಮ ಸೇಂದಿ(ಮದ್ಯ) ಪ್ರಕರಣಕ್ಕೆ ಸಂಬಂಧಪಟ್ಟಂತೆ 140ಪ್ರಕರಣಗಳನ್ನು ದಾಖಲಿಸಿ, 160ಮಂದಿಯನ್ನು ಬಂಧಿಸಲಾಗಿದೆ. 1,691 ಲೀ.ಮದ್ಯವನ್ನು ಹಾಗೂ 121 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಸದರಿ ಆರೋಪಿಗಳ ವಿರುದ್ಧ ಗೂಂಡ ಕಾಯ್ದೆ ಬಳಕೆ ಮಾಡಲು ಚರ್ಚೆಗಳು ನಡೆಯುತ್ತಿವೆ ಎಂದರು.
ರಾಯಚೂರಿನಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಬಳಸಲಾಗಿದೆ. ಅಕ್ರಮವಾಗಿ ಸೇಂದಿ ಮಾರಾಟ ಮಾಡುವ 25 ಮಂದಿಯನ್ನು ಗುರುತಿಸಲಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸಲಿದೆ ಎಂದು ತಿಮ್ಮಾಪೂರ್ ಭರವಸೆ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿ ಸದಸ್ಯೆ ಅನ್ನಪೂರ್ಣ ಈ., ರಾಜ್ಯದ ಗಡಿ ಜಿಲ್ಲೆ ಬಳ್ಳಾರಿಯಲ್ಲಿ ಆಂಧ್ರದಿಂದ ಸೇಂದಿಯನ್ನು ಅಕ್ರಮವಾಗಿ ತಂದು ಮಾರಾಟ ಮಾಡಲಾಗುತ್ತಿದೆ. ಇದು ಮನುಷ್ಯರು ಬಳಕೆ ಮಾಡಲು ಯೋಗ್ಯವಲ್ಲ ಎಂದು ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ. ಸರಕಾರ ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.