×
Ad

‘ಆರ್‌ಟಿಐ ಕಾರ್ಯಕರ್ತರ ಬ್ಲ್ಯಾಕ್‍ಮೇಲ್ ದಂಧೆಗೆ ಕಡಿವಾಣ ಹಾಕಬೇಕು’ ; ವಿಧಾನಸಭೆಯಲ್ಲಿ ಚರ್ಚೆ

Update: 2025-08-12 17:46 IST

ಬೆಂಗಳೂರು, ಆ. 12: ‘ಮಾಹಿತಿ ಹಕ್ಕು ಕಾಯ್ದೆ’(ಆರ್‌ಟಿಐ) ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಬ್ಲ್ಯಾಕ್‍ಮೇಲ್ ಮಾಡುತ್ತಿರುವ ಆರ್‌ಟಿಐ ಕಾರ್ಯಕರ್ತರಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು’ ಎಂದು ಪಕ್ಷಬೇಧ ಮರೆತು ಸದಸ್ಯರು ಆಗ್ರಹಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಕೌಜಲಗಿ ಮಹಾಂತೇಶ್ ಕೇಳಿದ ಪ್ರಶ್ನೆಗೆ ಧ್ವನಿಗೂಡಿಸಿದ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ಆರ್‌ಟಿಐ ಕಾರ್ಯಕರ್ತರು ಭವ್ಯ ಬಂಗಲೆಗಳನ್ನು ಕಟ್ಟಿಕೊಂಡು ಮನೆ ಮುಂದೆ ಕಾರುಗಳನ್ನು ನಿಲ್ಲಿಸಿಕೊಂಡು ವೈಭೋಗದ ಜೀವನ ನಡೆಸುತ್ತಿದ್ದಾರೆ. ಇವರಿಗೆ ಹಣ ಎಲ್ಲಿಂದ ಬರುತ್ತದೆ?’ ಎಂದು ಪ್ರಶ್ನಿಸಿದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಬ್ಲ್ಯಾಕ್‍ಮೇಲ್ ಮಾಡುವುದೇ ಇವರ ಕಸುಬಾಗಿದೆ. ಹೀಗಾಗಿ ಭ್ರಷ್ಟಾಚಾರ ತಡೆಯಲು ಕಾಯ್ದೆಯನ್ನು ರೂಪಿಸಲಾಗಿದೆ. ಅದೇ ಮಾದರಿಯಲ್ಲೇ ಆರ್‌ಟಿಐ ಕಾರ್ಯಕರ್ತರ ಭ್ರಷ್ಟಾಚಾರವನ್ನು ತಡೆಗಟ್ಟಲು ಅಗತ್ಯ ಕಾನೂನು ರೂಪಿಸಬೇಕು. ಅಲ್ಲದೆ, ಇವರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಅವರು ಆಗ್ರಹಿಸಿದರು.

ಆ ಬಳಿಕ ಸಿಎಂ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ‘ಮಾಹಿತಿ ಹಕ್ಕು ಕಾಯ್ದೆ ದುರುಪಯೋಗವಾಗುತ್ತಿರುವುದನ್ನು ಅಲ್ಲಗಳೆಯಲಾಗದು. ಆದರೆ, ದೇಶದ ಆಡಳಿತ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಹಾಗೂ ಪಾರದರ್ಶಕತೆಗೆ ಕಾಯ್ದೆ ಅನುಕೂಲವಾಗಿದೆ. ದುರುಪಯೋಗ ತಡೆಯಲು ನಿಯಮಗಳನ್ನು ರೂಪಿಸಲು ರಾಜ್ಯ ಸರಕಾರಕ್ಕೆ ಅವಕಾಶಗಳಿವೆ. ಸದಸ್ಯರು ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಿ ಮಾಹಿತಿ ನೀಡಬೇಕು’ ಎಂದು ಕೋರಿದರು.

ಆರ್‌ಟಿಐ ಕಾಯ್ದೆ ದುರುಪಯೋಗ ಸಂಬಂಧ ಇದುವರೆಗೆ ಯಾವ ಅಧಿಕಾರಿಯು ದೂರು ನೀಡಿಲ್ಲ. ಆದರೂ, ಸರಕಾರ ಪರಿಶೀಲನೆ ನಡೆಸಿ 26 ಮಂದಿಯನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಲೋಕಾಯುಕ್ತ ದಾಳಿಯ ವೇಳೆ ಸಿಕ್ಕಿ ಬಿದ್ದಿರುವ ಮಾಹಿತಿ ಆಯುಕ್ತ ರವೀಂದ್ರ ಗುರುನಾಥ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಸಿ.ಕೆ.ರಾಮಮೂರ್ತಿ, ಆಡಳಿತ ಪಕ್ಷದ ಕೋನರೆಡ್ಡಿ ಪ್ರತಿಕ್ರಿಯಿಸಿ ಸಂಬಂಧ ವಿಶೇಷ ಚರ್ಚೆಗೆ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿ ಸ್ಪೀಕರ್ ಖಾದರ್, ಈಗಾಗಲೇ ಅರ್ಧಗಂಟೆ ಚರ್ಚೆ ಆಗಿದೆ. ಪುನಃ ಚರ್ಚೆ ಅವಶ್ಯಕತೆ ಇಲ್ಲ ಎಂದು ನಿರಾಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News