ಸರಕಾರದಿಂದ ವೀರಶೈವ ಲಿಂಗಾಯತರನ್ನು ಬೇರ್ಪಡಿಸುವ ಕೆಲಸ : ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು : ಜಾತಿ ಗಣತಿ ವರದಿ ಸಮರ್ಪಕವಾಗಿಲ್ಲ. ಇದನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಕಾಂಗ್ರೆಸ್ ಸರಕಾರ ವೀರಶೈವ ಲಿಂಗಾಯತ ಸಮುದಾಯವನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ಮಂಗಳವಾರ ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಚಾಮರಾಜನಗರ, ಮೈಸೂರು, ರಾಮನಗರ, ಬೆಂಗಳೂರು ನಗರ/ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಹಾಸನ ಜಿಲ್ಲೆಗಳ ‘ವೀರಶೈವ ಲಿಂಗಾಯತರ ಮಹಾಸಂಗಮ’ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಪಂಗಡಗಳು ಒಂದಾಗಬೇಕು. ನಮ್ಮ ಸಮುದಾಯದಲ್ಲಿ ಸಾಕಷ್ಟು ಬಡವರಿದ್ದಾರೆ. ಅಂತಹವರನ್ನು ಗುರುತಿಸಿ ಅವರನ್ನು ಓಬಿಸಿಗೆ ಸೇರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನಾವು ಒಗ್ಗಟ್ಟಾಗಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಯಡಿಯೂರಪ್ಪನವರ ವಿರುದ್ಧ ಕೆಲವು ನಾಯಿ-ನರಿಗಳೆಲ್ಲಾ ಮಾತನಾಡುತ್ತವೆ. ಅವರ ಶಕ್ತಿ ಏನೆಂಬುದು ರಾಜ್ಯಕ್ಕೆ ಗೊತ್ತಿದೆ. ಯಡಿಯೂರಪ್ಪ ಅವರನ್ನು ಕೇವಲ ವೀರಶೈವ ಲಿಂಗಾಯತ ಸಮುದಾಯ ಮಾತ್ರ ನಾಯಕ ಅನ್ನುವುದಿಲ್ಲ, ಓಬಿಸಿ, ದಲಿತ ಸಮುದಾಯಗಳೂ ಸಹ ಯಡಿಯೂರಪ್ಪ ಒಬ್ಬ ಮಹಾನ್ ನಾಯಕ ಎಂದು ಅಪ್ಪಿಕೊಂಡಿವೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮಾತನಾಡುವ ನಾಯಿ-ನರಿಗಳಿಗೆ ತಲೆಕೆಡಿಸಿಕೊಳ್ಳಬಾರದು ಎಂದು ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ. ಅವರೊಬ್ಬ ಮೇರು ನಾಯಕ, ಪ್ರಶ್ನಾತೀತ ನಾಯಕ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಯಡಿಯೂರಪ್ಪನವರ ಬೆಂಬಲ ಬಹುಮುಖ್ಯ. ಜೊತೆಗೆ ವೀರಶೈವ ಲಿಂಗಾಯತರ ಒಗ್ಗಟ್ಟು ಮುಖ್ಯವಾಗುತ್ತದೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು. ಸಭೆಯಲ್ಲಿ ಲಿಂಗಾಯತ ಸಮುದಾಯದ ವಿವಿಧ ಮಠಾಧೀಶರು, ಸಮುದಾಯದ ಮುಖಂಡರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.