ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ, ಪತ್ನಿಗೆ ಲೋಕಾಯುಕ್ತ ಕ್ಲೀನ್ಚಿಟ್?
ಸಿಎಂ ಸಿದ್ದರಾಮಯ್ಯ
ಬೆಂಗಳೂರು : ತೀವ್ರ ವಿವಾದ ಸ್ವರೂಪ ಪಡೆದುಕೊಂಡಿದ್ದ ಮೈಸೂರಿನ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಅವರಿಗೆ ವರದಿಯಲ್ಲಿ ಕ್ಲೀನ್‍ಚೀಟ್ ನೀಡಲಾಗಿದ್ದು, ಜ.27ರಂದು ಕೋರ್ಟಿಗೆ ವರದಿ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಈ ಸಂಬಂಧ ಮುಡಾ ಹಗರಣದ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಸೋಮವಾರ(ಜ.27) ಕೋರ್ಟ್‍ಗೆ ಸಲ್ಲಿಕೆ ಮಾಡಲಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ ಎನ್ನಲಾಗಿದೆ. ಆದರೆ, ನಿವೇಶನ ಪ್ರಕ್ರಿಯೆ ಸಂದರ್ಭದಲ್ಲಿ ಡಿನೋಟಿಫೈ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಡಾ ಆಯುಕ್ತರು, ಕಂದಾಯ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ. ಅಧಿಕಾರಿಗಳು ಅಪರಾಧ ಎಸಗಿರುವ ಬಗ್ಗೆ ಮುಂದೇನು ಮಾಡಬೇಕೆಂಬುದರ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಕರಣದ ಹಿನ್ನೆಲೆ?: ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಪ್ರಮುಖ ಪ್ರದೇಶದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿರುವ ಭೂಮಿಗಿಂತ ಅಧಿಕ ಮೌಲ್ಯದ ನಿವೇಶವನ್ನು ಪರಿಹಾರವಾಗಿ ಹಂಚಿಕೆ ಮಾಡಲಾಗಿದೆ ಎಂಬುದು ಆರೋಪವಾಗಿದೆ. ಮುಡಾದಿಂದ ಪಾರ್ವತಿ ಅವರಿಗೆ 50:50 ಅನುಪಾತದ ಯೋಜನೆಯಡಿ ಅವರ 3.16 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಮಂಜೂರು ಮಾಡಿದೆ. ಪಾರ್ವತಿ ಅವರಿಗೆ 3.16 ಎಕರೆ ಜಮೀನಿನ ಮೇಲೆ ಯಾವುದೇ ಕಾನೂನು ಹಕ್ಕು ಇಲ್ಲ ಎಂದು ಆರ್‌ಟಿಐ ಕಾರ್ಯಕರ್ತರು ಕೋರ್ಟ್ ಮೊರೆ ಹೋಗಿದ್ದರು.
ಮುಡಾ ಹಗರಣದ ಆರೋಪ ಪ್ರಬಲವಾದ ಹಿನ್ನೆಲೆ ತನಿಖೆಗಾಗಿ ಕಾಂಗ್ರೆಸ್ ಸರಕಾರ ಜುಲೈ 14 ರಂದು ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಪಿಎನ್ ದೇಸಾಯಿ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿತು. ಜುಲೈ 26ರಂದು ಟಿಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ರಾಜ್ಯಪಾಲರು ಸಿಎಂಗೆ ಕಾರಣ ಕೇಳಿ, ಸರಕಾರಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು.
ಆಗಸ್ಟ್ 1ರಂದು ಸಿಎಂ ಗೈರಿನಲ್ಲಿ ಸಂಪುಟ ನಿರ್ಧಾರ ಕೈಗೊಂಡು, ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ಮಾಡಿ, ಅರ್ಜಿಯನ್ನು ತಿರಸ್ಕರಿಸಿತ್ತು.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿಯಮ ಬಾಹಿರವಾಗಿ ನಿವೇಶನಗಳನ್ನು ಪಡೆದ ಆರೋಪ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು.