‘ಮುಡಾ’ ಸರಕಾರಕ್ಕೆ ವರದಿ ಸಲ್ಲಿಸಿದ ನ್ಯಾ.ದೇಸಾಯಿ ನೇತೃತ್ವದ ಆಯೋಗ
ಬೆಂಗಳೂರು : ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ’(ಮುಡಾ)ದಲ್ಲಿ ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಅಕ್ರಮಗಳ ಕುರಿತು ತನಿಖೆ ನಡೆಸಿರುವ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪಿ.ಎನ್.ದೇಸಾಯಿ ನೇತೃತ್ವದ ಆಯೋಗವು ರಾಜ್ಯ ಸರಕಾರಕ್ಕೆ ಆರು ಸಂಪುಟಗಳ ವರದಿ ಸಲ್ಲಿಸಿದೆ.
ಗುರುವಾರ ವಿಧಾನಸೌಧದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು, ಸರಕಾರದ ಪರವಾಗಿ ವರದಿ ಸ್ವೀಕರಿಸಿದರು. ಮುಡಾ ನಿವೇಶನ ಹಂಚಿಕೆ ಪ್ರಕರಣದ ಕುರಿತು ರಾಜ್ಯ ಸರಕಾರ 2024ರ ಜುಲೈನಲ್ಲಿ ನಿವೃತ್ತ ನ್ಯಾಯಾಧೀಶ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಆರು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಿತ್ತು.
‘ಮುಡಾ’ದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ರಿಲೀಫ್ ನೀಡಿತ್ತು. ಇದೀಗ ನಿವೃತ್ತ ನ್ಯಾಯಾಧೀಶ ದೇಸಾಯಿ ನೇತೃತ್ವದ ಆಯೋಗವು ನೀಡಿದ ವರದಿಯಲ್ಲಿ ಸಿಎಂ ಕುಟುಂಬಕ್ಕೆ ಕ್ಲೀನ್‍ಚಿಟ್ ನೀಡಲಾಗಿದೆ ಎಂದು ಹೇಳಲಾಗಿದೆ.
‘ಮುಡಾ’ ಪ್ರಕರಣದಲ್ಲಿ ಸಿದ್ದರಾಮಯ್ಯನವರು ತಮ್ಮ ಅಧಿಕಾರ ಬಳಸಿರುವುದು ಕಂಡುಬಂದಿಲ್ಲ. ತಮ್ಮ ಅಧಿಕಾರ ಬಳಸಿರುವುದಕ್ಕೆ ಪುರಾವೆ ಇಲ್ಲ’ ಎಂದು ನ್ಯಾ.ದೇಸಾಯಿ ನೇತೃತ್ವದ ಸಮಿತಿ ವರದಿಯಲ್ಲಿ ಸ್ಪಷ್ಟಪಡಿಸಿದೆ. ಸಿಎಂ ಪತ್ನಿ ಪಾರ್ವತಿ ಅವರು, ‘ಇಂತಹದ್ದೇ ಜಾಗದಲ್ಲಿ ಪರ್ಯಾಯ ನಿವೇಶನ ಕೊಡಿ’ ಎಂದು ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ, ಈ ಪ್ರಕರಣದಲ್ಲಿ ಅಧಿಕಾರಿಗಳ ಲೋಪದ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಗೊತ್ತಾಗಿದೆ.