×
Ad

ಮುರುಘಾ ಶರಣರ ಫೋಕ್ಸೊ ಪ್ರಕರಣ: 2ನೇ ಆರೋಪಿ ಎಸ್.ರಶ್ಮಿಗೆ ಹೈಕೋರ್ಟ್‍ನಿಂದ ಜಾಮೀನು

Update: 2023-12-22 20:35 IST

ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಫೋಕ್ಸೊ ಪ್ರಕರಣದ ಎರಡನೇ ಆರೋಪಿ ಎಸ್.ರಶ್ಮಿ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಕುಮ್ಮಕ್ಕು ನೀಡಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಎಸ್.ರಶ್ಮಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮದ್ ನವಾಜ್ ಅವರಿದ್ದ ನ್ಯಾಯಪೀಠ, ಜಾಮೀನು ಮಂಜೂರು ಮಾಡಿ ಆದೇಶಿಸಿತು.

ಅರ್ಜಿದಾರರು 2 ಲಕ್ಷ ರೂ.ಮೌಲ್ಯದ ಬಾಂಡ್, ಇಬ್ಬರ ಭದ್ರತೆ ನೀಡಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಪ್ರಕರಣದಲ್ಲಿ ಅಪರಾಧ ಕೃತ್ಯ ಎಸಗಲು ಮೊದಲನೇ ಆರೋಪಿ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಕುಮ್ಮಕ್ಕು ಹಾಗೂ ಸಹಕಾರ ನೀಡಿದ ಆರೋಪ ಅರ್ಜಿದಾರೆಯ ಮೇಲಿದೆ. ಇದೇ ಆರೋಪವನ್ನು ಮೂರನೇ ಆರೋಪಿ ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯ ಎದುರಿಸುತ್ತಿದ್ದಾರೆ. ಅವರಿಗೆ ಈಗಾಗಲೇ ನ್ಯಾಯಾಲಯ ಜಾಮೀನು ನೀಡಿದೆ. ಮತ್ತೊಂದೆಡೆ, ಮೊದಲನೇ ಆರೋಪಿ ಶಿವಮೂರ್ತಿ ಶರಣರಿಗೆ ಜಾಮೀನು ಸಿಕ್ಕಿದೆ. ಹೀಗಾಗಿ, ಅರ್ಜಿದಾರೆಯೂ ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಈ ಆದೇಶದಿಂದ ಪ್ರಕರಣದಲ್ಲಿ ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಂತಾಗಿದೆ.

ಪ್ರಕರಣವೇನು?: ಇಬ್ಬರು ಬಾಲಕಿಯರು ಮೈಸೂರಿನ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆ.26ರಂದು ದೂರು ದಾಖಲಿಸಿ, ಮುರುಘಾ ಶರಣರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನಲ್ಲಿ ಎಸ್.ರಶ್ಮಿ ಅವರು ಬಾಲಕಿಯರನ್ನು ಮುರುಘಾ ಸ್ವಾಮೀಜಿಯ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು ಎಂದು ಹೇಳಲಾಗಿದೆ.

ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಸ್ವಾಮೀಜಿಯ ಕುಕೃತ್ಯಕ್ಕೆ ಸಹಕರಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಶ್ಮಿ ಅವರನ್ನು ಪೊಲೀಸರು ಬಂಧಿಸಿದ್ದರು. ಚಿತ್ರದುರ್ಗದ ಸೆಷನ್ಸ್ ನ್ಯಾಯಾಲಯ ರಶ್ಮಿಗೆ ಜಾಮೀನು ನಿರಾಕರಿಸಿತ್ತು. ರಶ್ಮಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News