×
Ad

ಸಚಿವ ಪ್ರಿಯಾಂಕ್ ಖರ್ಗೆ ಜೊತೆ ಇಡೀ ʼಅಹಿಂದʼ ಸಮಾಜವಿದೆ : ನಸೀರ್ ಅಹ್ಮದ್

"ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆಯೇ ಎಂಬ ಅನುಮಾನ ಮೂಡುತ್ತಿದೆ"

Update: 2025-10-16 21:30 IST

 ನಸೀರ್ ಅಹ್ಮದ್

ಬೆಂಗಳೂರು, ಅ.16 : ಸರಕಾರಿ ಜಾಗಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವುದನ್ನು ವಿರೋಧಿಸಿ, ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದೂರವಾಣಿ ಕರೆ ಮಾಡಿ ಬೆದರಿಕೆಗಳನ್ನು ಹಾಕುತ್ತಿರುವುದು ನೋಡಿದರೆ, ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ತಿಳಿಸಿದ್ದಾರೆ.

ಗುರುವಾರ ‘ವಾರ್ತಾಭಾರತಿ’ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಯಾವುದೇ ವಿಷಯವಿರಲಿ ಟೀಕೆಗಳು ರಚನಾತ್ಮಕವಾಗಿ ಇರಬೇಕು. ರಾಜ್ಯದ ಒಬ್ಬ ಸಚಿವ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ, ಅವರಿಗೆ ಬೆದರಿಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ? ಆರೆಸ್ಸೆಸ್‍ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಈಗ ಹೊಸದಾಗಿ ಚರ್ಚೆಗಳು ನಡೆಯುತ್ತಿಲ್ಲ. ಹಲವಾರು ವರ್ಷಗಳಿಂದ ಈ ಕುರಿತು ಚರ್ಚೆಗಳು ನಡೆದಿವೆ ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ಒಬ್ಬಂಟಿಯಲ್ಲ. ಅವರ ಜೊತೆ ಕೋಟ್ಯಂತರ ಜನ ಇದ್ದಾರೆ. ಹಿಂದುಳಿದ, ದಲಿತರು, ಅಲ್ಪಸಂಖ್ಯಾತರು ಅವರ ಜೊತೆ ಇದ್ದೇವೆ. ಆರೆಸ್ಸೆಸ್ ವಿರುದ್ಧ ಅವರು ಎತ್ತಿರುವ ಧ್ವನಿಯ ಪರವಾಗಿ ನಾವು ಇದ್ದೇವೆ ಎಂದು ನಸೀರ್ ಅಹ್ಮದ್ ತಿಳಿಸಿದರು.

ಸ್ವಾತಂತ್ರ್ಯ ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಆರೆಸ್ಸೆಸ್ ನಿಷೇಧಿಸಲಾಗಿತ್ತು. ಆರೆಸ್ಸೆಸ್ ನಡೆಸುತ್ತಿರುವ ಚಟುವಟಿಕೆಗಳ ಕುರಿತು ಸಾರ್ವಜನಿಕರಲ್ಲಿಯೂ ಸಮಾಧಾನ ಇಲ್ಲ. ಆದುದರಿಂದ, ಸರಕಾರಿ ಜಾಗ, ಉದ್ಯಾನವನ, ದೇವಸ್ಥಾನ, ಶಾಲಾ-ಕಾಲೇಜುಗಳ ಆವರಣ, ಆಟದ ಮೈದಾನಗಳಲ್ಲಿ ಆರೆಸ್ಸೆಸ್ ಶಾಖೆಗಳನ್ನು ಮಾಡುವುದರ ಬಗ್ಗೆ ಚರ್ಚೆಯಾಗಬೇಕು ಎಂದು ನಸೀರ್ ಅಹ್ಮದ್ ತಿಳಿಸಿದರು.

ಸರಕಾರಿ ಜಾಗಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸಿ ತಮಿಳುನಾಡು ಸರಕಾರವು ಆದೇಶ ಹೊರಡಿಸಿ, ಅನುಷ್ಠಾನಗೊಳಿಸಿದೆ. ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರವನ್ನು ಸಿದ್ದರಾಮಯ್ಯ, ಮುಖ್ಯ ಕಾರ್ಯದರ್ಶಿಗೆ ಕಳುಹಿಸಿ, ತಮಿಳುನಾಡಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ತರಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಈ ನಡುವೆ ಬಿಜೆಪಿಯವರು ದಿಲ್ಲಿಯಿಂದ ಬೆಂಗಳೂರಿನವರೆಗೆ ಪ್ರಿಯಾಂಕ್ ಖರ್ಗೆ ವಿರುದ್ಧ ಅಭಿಯಾನ ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.

100 ವರ್ಷಗಳಿಂದಲೂ ಆರೆಸ್ಸೆಸ್ ಸರಸಂಘ ಸಂಚಾಲಕರನ್ನಾಗಿ ಒಂದು ಸಮಾಜಕ್ಕೆ ಸೇರಿದವರನ್ನು ಮಾತ್ರ ಯಾಕೆ ಆಯ್ಕೆ ಮಾಡಲಾಗುತ್ತಿದೆ? ಆರೆಸ್ಸೆಸ್ ಮುಖವಾಡದ ಬಗ್ಗೆ ಜನರಿಗೆ ತಿಳಿಸಬೇಕು. ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳ ನಾಯಕರು ಈ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ನಸೀರ್ ಅಹ್ಮದ್ ಕರೆ ನೀಡಿದರು.

ಆರೆಸ್ಸೆಸ್‍ಗೆ ಸಂವಿಧಾನದ ಮೇಲೆ ಗೌರವವಿದೆಯೇ?: ‘ಆರೆಸ್ಸೆಸ್‍ಗೆ ಸಂವಿಧಾನದ ಮೇಲೆ ಗೌರವವಿದೆಯೇ? ಸ್ವಾತಂತ್ರ್ಯ ನಂತರವೂ ಯಾಕೆ ಆರೆಸ್ಸೆಸ್ ಅನ್ನು ನೋಂದಣಿ ಮಾಡಿಸಿಲ್ಲ? ಸಂಘದ ಆದಾಯ, ವೆಚ್ಚಗಳ ಬಗ್ಗೆ ಯಾಕೆ ಲೆಕ್ಕಪರಿಶೋಧನೆ ಮಾಡಿಸಿಲ್ಲ? ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸುವವರು ಯಾಕೆ ಉತ್ತರದಾಯಿತ್ವ ಪ್ರದರ್ಶಿಸುವುದಿಲ್ಲ? ಇದನ್ನೆಲ್ಲ ನೋಡಿದರೆ ಸರಕಾರ ಆರೆಸ್ಸೆಸ್ ಚಟುವಟಿಕೆಗಳ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು’

-ನಸೀರ್ ಅಹ್ಮದ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News