‘ಕೇಂದ್ರದ ತೆರಿಗೆ ಪಾಲಿನಲ್ಲಿ ಅನ್ಯಾಯʼ ರಾಜ್ಯದ ಪರ ಧ್ವನಿ ಎತ್ತಬೇಕು : ಬಿಜೆಪಿ ಸಂಸದರಿಗೆ ನಯನಾ ಮೋಟಮ್ಮ ಆಗ್ರಹ
ನಯನಾ ಮೋಟಮ್ಮ
ಬೆಂಗಳೂರು : ‘ಕೇಂದ್ರ ಸರಕಾರದಿಂದ ತೆರಿಗೆ ಪಾಲು ಕರ್ನಾಟಕ ರಾಜ್ಯಕ್ಕೆ ಬಾರದಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಜೆಪಿ ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತಬೇಕು’ ಎಂದು ಆಡಳಿತ ಪಕ್ಷದ ಸದಸ್ಯೆ ನಯನಾ ಮೋಟಮ್ಮ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣಾ ನಿರ್ಣಯವನ್ನು ಅನುಮೋದಿಸಿ ಮಾತನಾಡಿದ ಅವರು, ರಾಜ್ಯದಿಂದ ಒಂದು ರೂ.ತೆರಿಗೆ ಕೇಂದ್ರಕ್ಕೆ ಪಾವತಿಯಾದರೆ ಕೇವಲ 15 ಪೈಸೆಗಿಂತಲೂ ಕಡಿಮೆ ತೆರಿಗೆ ಪಾಲು ರಾಜ್ಯಕ್ಕೆ ಬರುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದೆ. ಹೆಚ್ಚಿನ ಅನುದಾನಕ್ಕೆ ಬಿಜೆಪಿ ಸಂಸದರು ಹಾಗೂ ಆ ಪಕ್ಷದ ಮುಖಂಡರು ಒತ್ತಾಯಿಸಬೇಕು. ರಾಜ್ಯದ ತೆರಿಗೆ ಪಾಲನ್ನು ಜನರ ಹಿತದ ಉದ್ದೇಶಕ್ಕಾಗಿ ಕೇಂದ್ರ ಸರಕಾರ ನೀಡಬೇಕು ಎಂದು ಕೋರಿದರು.
ಕನ್ನಡ ಭಾಷೆಯ ಬೆಳವಣಿಗೆಗೆ, ಕನ್ನಡಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ, ಕೇಂದ್ರ ಸರಕಾರ ಎಲ್ಲ ಹಂತಗಳಲ್ಲಿಯೂ ಹಿಂದಿ ಹೇರಿಕೆ ಮಾಡುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು’ ಎಂದ ನಯನಾ ಮೋಟಮ್ಮ, ಮುಂದಿನ ಬಜೆಟ್ ವೇಳೆಗೆ ರಾಜ್ಯದ ಆರ್ಥಿಕತೆ ಒಂದು ಟ್ರಿಲಿಯನ್‍ಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ವಿಪಕ್ಷಗಳು ಟೀಕೆ ಮಾಡುತ್ತವೆ. ಆದರೆ, ವಿಶ್ವಸಂಸ್ಥೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ. 19 ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ 70ಸಾವಿರ ಕೋಟಿ ರೂ. ಫಲಾನುಭವಿಗಳ ಖಾತೆಗೆ ನೇರವಾಗಿ ತಲುಪಿಸಲಾಗಿದೆ ಎಂದ ಅವರು, ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳದಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಲಾಗಿದೆ. ಇದರಿಂದ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಕಾರ್ಯಗಳಿಗೂ ಅನುಕೂಲವಾಗಲಿದೆ ಎಂದರು.