×
Ad

ಬಿಹಾರದಲ್ಲಿ ʼಎನ್‌ಡಿಎʼಗೆ ಬಹುಮತ; ರಾಜ್ಯ ಬಿಜೆಪಿ, ಕಾಂಗ್ರೆಸ್ ನಾಯಕರು ಹೇಳಿದ್ದೇನು?

Update: 2025-11-14 17:47 IST

ಬೆಂಗಳೂರು : ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಎನ್​ಡಿಎ ಮೈತ್ರಿಕೂಟ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದಿದೆ. ಈ ಕುರಿತು ಮಹಾಘಟಬಂಧನದ ಸೋಲು ಹಾಗೂ ಎನ್‌ಡಿಎ ಗೆಲುವಿಗೆ ರಾಜ್ಯದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

ಜನರ ತೀರ್ಪನ್ನು ಒಪ್ಪಿಕೊಳ್ಳಬೇಕು: ಮುಖ್ಯಮಂತ್ರಿ

ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜನರು ಕೊಟ್ಟಿರುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಪ್ರಥಮ ಪ್ರಧಾನಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ರವರ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಹಾರದಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಹಿನ್ನಡೆ ಅನುಭವಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿರುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ನಿತೀಶ್ ಕುಮಾರ್ ನಾಯಕತ್ವ ಮೆಚ್ಚಿದ ಜನ : ಯಡಿಯೂರಪ್ಪ

ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿ, ಬಿಹಾರದಲ್ಲಿ ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು. ಆದರೆ ಇಷ್ಟು ದೊಡ್ಡ ಮಟ್ಟಿಗೆ ಸ್ಥಾನಗಳನ್ನು ಗಳಿಸುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ. ಎನ್‌ಡಿಎ 190 ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ನೇತೃತ್ವದ, ನಿತೀಶ್ ಕುಮಾರ್ ಅವರ ನಾಯತ್ವವನ್ನು ಜನರು ಮಚ್ಚಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಸೋಲಿನ ಶತಕ : ಆರ್‌.ಅಶೋಕ್‌

ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು. ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ ಆದರೆ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನ ಎಷ್ಟು ಚುನಾವಣೆಗಳಲ್ಲಿ ಸೋಲಿಸಿದ್ದಾರೆ ಎನ್ನುವುದನ್ನು ಲೆಕ್ಕ ಮಾಡುವುದು ಕಷ್ಟ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಸುಶಾಸನ, ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿವೃದ್ಧಿ ರಾಜಕಾರಣದಿಂದಾಗಿ ಜನಮನ್ನಣೆ ಗಳಿಸಿರುವ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಸರ್ಕಾರದ ಮುಂದೆ ಜಂಗಲ್ ರಾಜ್ ಕುಖ್ಯಾತಿಯ ಆರ್ ಜೆಡಿ - ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಪಕ್ಕಕ್ಕೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ರಾಹುಲ್ ಗಾಂಧಿ ಅವರು ಮುಖಭಂಗ ತಪ್ಪಿಸಿಕೊಳ್ಳಲು ವೋಟ್ ಚೋರಿ ಎಂಬ ಕಟ್ಟುಕಥೆ ಮೂಲಕ ಜನರನ್ನ ದಿಕ್ಕು ತಪ್ಪಿಸಲು ಹೊರಟಿದ್ದು. ಆದರೆ ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ "ವೋಟ್ ಚೋರಿ" ಪ್ರಹಸನವ್ನ ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಹಾಗು ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ ಎಂದು ಹೇಳಿದರು.

ಹರಿಯಾಣ, ಮಹಾರಾಷ್ಟ್ರ, ಬಿಹಾರದಲ್ಲಿ ಬಂದಿರುವ ಸ್ಥಿತಿಯೇ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲೂ ಬರುವ ದಿನ ಬಹಳ ದೂರವಿಲ್ಲ. ಈಗಾಗಲೇ ಜನಮನ್ನಣೆ ಕಳೆದುಕೊಂಡಿರುವ ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲೂ ಧೂಳೀಪಟ ಆಗುವುದು ನೂರಕ್ಕೆ ನೂರು ಗ್ಯಾರೆಂಟಿ ಎಂದಿದ್ದಾರೆ.

ಚುನಾವಣಾ ಆಯೋಗಕ್ಕೆ ಅಭಿನಂದನೆ : ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್, ಬಿಹಾರದಲ್ಲಿ ಚುನಾವಣೆಗೆ ಮುಂಚಿತವಾಗಿ 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಮೂಲಕ ಈ ಅದ್ಭುತವಾದ ಫಲಿತಾಂಶ ಬರಲು ಕಾರಣಕರ್ತರಾದ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಆರೆಸ್ಸೆಸ್‌ನ ರಾಜಕೀಯ ಪಕ್ಷವಾಗಿದೆ. ಎಲ್ಲ ರೀತಿಯಲ್ಲೂ ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ನಿರ್ನಾಮ ಮಾಡಲು ಚುನಾವಣಾ ಆಯೋಗವು, ಆರೆಸ್ಸೆಸ್‌ನ ಒಂದು ಘಟಕವಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಗಾರಿದರು.

ಮತದಾರರ ತೀರ್ಪಿಗೆ ತಲೆಬಾಗುತ್ತೇವೆ: ಡಿ.ಕೆ.ಶಿವಕುಮಾರ್

ಬಿಹಾರ ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಮತದಾರರ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜನ ತಮ್ಮ ಆದೇಶ ನೀಡಿದ್ದು, ಅದನ್ನು ಪಾಠವಾಗಿ ಪರಿಗಣಿಸುತ್ತೇವೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಹೊಸ ತಂತ್ರಗಾರಿಕೆ ರೂಪಿಸುತ್ತೇವೆ ಎಂದು ತಿಳಿಸಿದರು.

ನಿರೀಕ್ಷೆ ಮೀರಿದ ಫಲಿತಾಂಶ : ಬಿ.ವೈ.ರಾಘವೇಂದ್ರ

ಇಡೀ ದೇಶದ ಜನ ಮತ್ತೊಮ್ಮೆ ಎನ್‌ಡಿಎ ಪರವಾಗಿ ಆಶೀರ್ವಾದ ಮಾಡುತ್ತಿದ್ದಾರೆ ಎಂಬುದಕ್ಕೆ ಬಿಹಾರದ ಫಲಿತಾಂಶವೇ ಸಾಕ್ಷಿ. ನಿರೀಕ್ಷೆ ಮೀರಿದ ಫಲಿತಾಂಶ ಲಭಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬಿಹಾರ ಚುನಾವಣಾ ಫಲಿತಾಂಶ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಹಾಘಟ ಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯೇ ಸೋಲು, ಗೆಲುವಿನ ಮಧ್ಯೆ ಸಿಲುಕಿದ್ದಾರೆ. ಹಿಂದುಳಿದವರು, ಅಲ್ಪಸಂಖ್ಯಾತರು ಹೆಚ್ಚಿರುವ ಕ್ಷೇತ್ರಗಳಲ್ಲಿಯೂ ಬಿಜೆಪಿ, ನಿತೀಶ್ ಕುಮಾರ್ ಮತ್ತು ಎನ್‌ಡಿಎ ಪರವಾಗಿ ಜನ ಒಲವು ತೋರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಗೆ ಬಿಹಾರದ ಜನರು ಬೆಂಬಲ ನೀಡಿದ್ದಾರೆ ಎಂದರು.

ಎನ್‌ಡಿಎ ಮೈತ್ರಿಕೂಟದ ಸಂಘಟಿತ ಹೋರಾಟದಿಂದ ಗೆಲುವು : ವಿಜಯೇಂದ್ರ

ಬಿಹಾರ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಜಯ, ಪ್ರಧಾನಿ ನರೇಂದ್ರ ಮೋದಿಯವರ ಸದೃಢ ನಾಯಕತ್ವದ ಕೊರಳನ್ನು ಅಲಂಕರಿಸಿದ ಪ್ರಜಾಪ್ರಭುತ್ವದ ವಿಜಯದ ಹಾರವಾಗಿ ವಿಜೃಂಭಿಸಿದೆ. ಪ್ರಧಾನಿ ಅವರ ನೇತೃತ್ವದ ಎನ್‌ಡಿಎ ಸರಕಾರ ದೇಶಕ್ಕೆ ಅನಿವಾರ್ಯ ಎಂಬ ಸಂದೇಶವನ್ನೂ ಬಿಹಾರದ ಮತದಾರರು ರವಾನಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸಂಘಟಿತ ಹೋರಾಟ, ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರ ಕಾರ್ಯತಂತ್ರ, ಮುಖ್ಯಮಂತ್ರಿ ನಿತೀಶ್‌ ಅವರ ದಕ್ಷ ಆಡಳಿತವನ್ನು ಮೆಚ್ಚಿ ಬಿಹಾರದ ಜನತೆ ಮತ್ತೆ ಎನ್‌ಡಿಎ ಸರ್ಕಾರವನ್ನು ನಿರೀಕ್ಷೆ ಮೀರಿದ ಐತಿಹಾಸಿಕ ದಾಖಲೆಯ ಬಹುಮತದಿಂದ ಗೆಲ್ಲಿಸಿ ಆಶೀರ್ವದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಮತಚೋರಿ ಹೆಸರಿನಲ್ಲಿ ಅಪಪ್ರಚಾರ ನಡೆಸಿ ರಾಜಕೀಯ ಚೋರತನ ಮಾಡಲು ಹೊರಟ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಗೆ ಬಿಹಾರದ ಮತದಾರರು ತಕ್ಕ ಪಾಠ ಕಲಿಸಿ ಬಿಹಾರದ ರಾಜಕೀಯ ಭೂಪಟದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವಕ್ಕಾಗಿ ತಿಣುಕಾಡಬೇಕಾದ ಸ್ಥಿತಿಗೆ ತಳ್ಳಿದ್ದಾರೆ. ಆರ್.ಜೆ.ಡಿ ಸೇರಿದಂತೆ ಮಹಾಘಟಬಂಧನ್ ಕೂಟವನ್ನು ಬಿಹಾರದ ಜನತೆ ಸೋಲಿನ ಬಂಧನದ ರುಚಿ ತೋರಿಸಿದ್ದಾರೆ. ಪಾಳೆಗಾರಿಕೆ ರಾಜಕೀಯಕ್ಕೆ ಇನ್ನೆಂದೂ ಅವಕಾಶ ನೀಡಲಾಗದು ಎಂಬ ಉತ್ತರ ಕೊಟ್ಟಿದ್ದಾರೆ ಎಂದದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News