×
Ad

ನೀಟ್ ಫಲಿತಾಂಶ : ವಿಜಯಪುರದ ನಿಖಿಲ್ ಸೋನ್ನದ್ ರಾಜ್ಯಕ್ಕೆ ಟಾಪರ್

Update: 2025-06-14 21:25 IST

ನಿಖಿಲ್ ಸೋನ್ನದ್

ಬೆಂಗಳೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಮೊದಲ ಟಾಪರ್ ಆಗಿ ವಿಜಯಪುರ ಮೂಲದ ನಿಖಿಲ್ ಸೋನ್ನದ್ ಹೊರ ಹೊಮ್ಮಿದ್ದಾರೆ.

ಶನಿವಾರ ಫಲಿತಾಂಶ ಪ್ರಕಟಗೊಂಡಿದ್ದು, ವಿಜಯಪುರ ನಗರದ 'ಸಂಜೀವಿನಿ' ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿ ಡಾ.ಸಿದ್ದಪ್ಪ ಸೋನ್ನದ್ ಮತ್ತು ಡಾ.ಮೀನಾಕ್ಷಿ ಸೋನ್ನದ್ ಅವರ ಪುತ್ರ. ಮಂಗಳೂರು ವಳಚ್ಚಿಲ್‌ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೋನ್ನದ್ ಶೇ.99.99 ಅಂಕಗಳಿಸುವ ಮೂಲಕ ರಾಜ್ಯದ ಮೊದಲ ಟಾಪರ್ ಆಗಿದ್ದಾರೆ.

ಟಾಪ್ 100 ರ್ಯಾಂಕ್‍ನಲ್ಲಿ ನಿಖಿಲ್ ಸೋನ್ನದ್ 17ನೆ ರ್ಯಾಂಕ್ ಪಡೆದಿದ್ದಾರೆ. ಅದೇ ರೀತಿ, ರಾಜ್ಯದ ರಿಚೀರ್ ಗುಪ್ತಾ,(22) ತೇಜಸ್ ಶೈಲೇಶ್ ಘೋಟಲ್ಕರ್(38), ಪ್ರಾಂಶು ಜಹಾಂಗೀದಾರ್,(42) ಹರಿಣಿ ಶ್ರೀರಾಮ್(72), ಎಸ್.ದಿಂಗತ್(80), ಕೆ.ಜಿ.ನಿ(84) ಉತ್ತಮ ರ್ಯಾಂಕ್ ಪಡೆದಿದ್ದಾರೆ.

ಎಸ್.ಗೌತಮ್ ಕುಮಾರ್ ಶೇ.99.92 ಅಂಕಗಳಿಸುವ ಮೂಲಕ ಅಂಗವಿಕಲರ ಕೋಟಾದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಇನ್ನೂ 34 ರಾಜ್ಯಗಳ ಟಾಪರ್ ಪಟ್ಟಿಯನ್ನು ಪ್ರತ್ಯೇಕಿಸಲಾಗಿದ್ದು, ಇದರಲ್ಲಿ ನಮ್ಮ ರಾಜ್ಯ 17ನೇ ಸ್ಥಾನದಲ್ಲಿದೆ. ಒಟ್ಟಿನಲ್ಲಿ ಈ ಬಾರಿ ರಾಜ್ಯದಿಂದ 1.42 ಲಕ್ಷ ವಿದ್ಯಾರ್ಥಿಗಳು ನೀಟ್ ಹಾಜರಾಗಿದ್ದು, ಈ ಪೈಕಿ 83,582 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

460 ವಿದ್ಯಾರ್ಥಿಗಳು ಈ ವರ್ಷ ಕನ್ನಡ ವಿಷಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಜತೆಗೆ, ನೀಟ್ ಅನ್ನು ಈ ಬಾರಿ 13 ಭಾಷೆಗಳಲ್ಲಿ ನಡೆಸಲಾಗಿತ್ತು. ಇದರಲ್ಲಿ ಕನ್ನಡ ಒಂದು ಭಾಷೆಯಾಗಿದೆ. ವಿದೇಶದ 14 ನಗರಗಳಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.

ಅಭ್ಯರ್ಥಿಗಳು ಫಲಿತಾಂಶ ಪ್ರತಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ನೀಟ್ ಯುಜಿ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ, ಅವರು ಅರ್ಜಿ ಸಂಖ್ಯೆ, ಪಾಸ್‍ವರ್ಡ್ ನಮೂದಿಸಬೇಕಾಗುತ್ತದೆ. ಪರೀಕ್ಷೆಯಲ್ಲಿ ಅಭ್ಯರ್ಥಿ ಪಡೆದ ಶೇಕಡಾವಾರು ಅಂಕಗಳು ಮತ್ತು ಆಲ್ ಇಂಡಿಯಾ ರ್ಯಾಂಕಿಂಗ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಬಾರಿ 720 ಅಂಕಿಗಳಿಗೆ 144 ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಕೌನ್ಸೆಲಿಂಗ್‍ಗೆ ಅರ್ಹರು ಎಂದು ಪರಿಗಣಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News