‘ಕರ್ನಾಟಕ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣ’; ನೆದರ್ ಲ್ಯಾಂಡ್ಸ್ ನಿಯೋಗಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ
Netherlands PM Mark Rutte meets D K Shivakumar in Bengaluru
ಬೆಂಗಳೂರು: ‘ಅತ್ಯುತ್ತಮ ಕೈಗಾರಿಕಾ ನೀತಿ, ಮೂಲಭೂತ ಸೌಕರ್ಯ, ಮಾನವ ಸಂಪನ್ಮೂಲ, ಪರಿಸರದಿಂದಾಗಿ ಕರ್ನಾಟಕ ರಾಜ್ಯ ಭಾರತದಲ್ಲೆ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ, ಮೈಸೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು ನೀಡಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ನೆದರ್ ಲ್ಯಾಂಡ್ಸ್ ಪ್ರಧಾನಮಂತ್ರಿ ಮಾರ್ಕ್ ರುಟ್ಟೆ ಹಾಗೂ ಆ ದೇಶದ ವಿವಿಧ ಕಂಪೆನಿಗಳ ಪ್ರಮುಖರ ಜತೆ ಸಭೆ ನಡೆಸಿದ ಅವರು, ಕರ್ನಾಟಕ ರಾಜ್ಯ ನೆದರ್ ಲ್ಯಾಂಡ್ಸ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸಲು ನಾವು ಬಯಸುತ್ತೇವೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವವರ ಪೈಕಿ ಡಚ್ ಉದ್ಯಮಿಗಳು ಪ್ರಮುಖರಾಗಿದ್ದಾರೆ. ಭಾರತದಲ್ಲಿ ನೆದರ್ ಲ್ಯಾಂಡ್ಸ್ ಉದ್ಯಮಿಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ಶೇ.9ರಷ್ಟು ಬಂಡವಾಳವನ್ನು ಪಡೆದಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಡಚ್ ಕಂಪೆನಿಗಳು ಬಂಡವಾಳ ಹೂಡಿಕೆ ಮಾಡಿವೆ. ಶೆಲ್ ಹಾಗೂ ಫಿಲಿಪ್ಸ್ ಕಂಪೆನಿಗಳ ಜಾಗತಿಕ ಕೇಂದ್ರಗಳು ಕರ್ನಾಟಕದಲ್ಲಿವೆ ಎಂದು ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, 2022-23ನೆ ಆರ್ಥಿಕ ವರ್ಷದಲ್ಲಿ ಕರ್ನಾಟಕ ದೇಶದಲ್ಲೆ 2ನೇ ಅತಿದೊಡ್ಡ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಿದೆ. ಆ ಮೂಲಕ ದೇಶದಲ್ಲಿನ ಹೂಡಿಕೆಯಲ್ಲಿ ಶೇ.25ರಷ್ಟು ಹೂಡಿಕೆ ಕರ್ನಾಟಕ ರಾಜ್ಯದಲ್ಲಿ ಆಗಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ನೆದರ್ ಲ್ಯಾಂಡ್ಸ್ ಕಂಪೆನಿಗಳು 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಿ ಕಾರ್ಯನಿರ್ವಹಣೆ ಮಾಡುತ್ತಿವೆ ಎಂದು ಶಿವಕುಮಾರ್ ಗಮನ ಸೆಳೆದರು.
ಡಚ್ ಕಂಪೆನಿಗಳ ಜತೆಗಿನ ಈ ಬಾಂಧವ್ಯವನ್ನು ಮತ್ತಷ್ಟು ಸಧೃಡಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಕರ್ನಾಟಕ ಹಾಗೂ ನೆದರ್ ಲ್ಯಾಂಡ್ಸ್ ದೇಶ ಆಹಾರ ಉತ್ಪನ್ನ, ಜೈವಿಕ ತಂತ್ರಜ್ಞಾನ, ಫಾರ್ಮಾ, ಇನ್ನೋವೇಷನ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಾಮ್ಯತೆಗಳನ್ನು ಹೊಂದಿವೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ಕರ್ನಾಟಕ. ಜೈವಿಕ ತಂತ್ರಜ್ಞಾನ ಉತ್ಪನ್ನ ಹಾಗೂ ರಫ್ತು, ಅನ್ವೇಷಣೆ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಬೆಂಗಳೂರು ವಿಶ್ವದಲ್ಲೆ ನಾಲ್ಕನೇ ಸ್ಥಾನ ಪಡೆದಿದೆ. ವಿದ್ಯುತ್ ವಾಹನ, ಆವಿಷ್ಕಾರ, ವಸತಿ, 7 ಓಇಎಂ, 50ಕ್ಕೂ ಹೆಚ್ಚು ಕಾಪೋನೆಂಟ್ ಉತ್ಪಾದಕ ಹಾಗೂ 45ಕ್ಕೂ ಹೆಚ್ಚು ವಿದ್ಯುತ್ ವಾಹನಗಳ ಸ್ಟಾರ್ಟ್ ಅಪ್ ಗಳನ್ನು ಹೊಂದಿದ್ದೇವೆ ಎಂದು ಅವರು ತಿಳಿಸಿದರು.
ನಾವು ಕೃತಕ ಬುದ್ಧಿಮತ್ತೆ, ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಂತಹ ಕ್ಷೇತ್ರಗಳಿಗೆ ಪ್ರತ್ಯೇಕ ಕೈಗಾರಿಕಾ ನೀತಿ ಹೊಂದಿದ್ದೇವೆ. ಈ ನೀತಿಯಲ್ಲಿ 6-10 ವರ್ಷಗಳವರೆಗೆ ವಾರ್ಷಿಕ ವಹಿವಾಟಿನಲ್ಲಿ ಶೇ.2.25ರಷ್ಟು ಬಂಡವಾಳ ಉತ್ತೇಜನ ಸಬ್ಸಿಡಿ ನೀಡಲಾಗುವುದು. ಏರೋಸ್ಪೇಸ್, ರಕ್ಷಣೆ, ಸಂಚಾರ, ಸಂಶೋಧನೆ ಮತ್ತು ಅಭಿವೃದ್ಧಿ, ದತ್ತಾಂಶ ಕೇಂದ್ರ, ಮತ್ತು ಜವಳಿ ಕ್ಷೇತ್ರಗಳಿಗೆ ಪ್ರತ್ಯೇಕ ನೀತಿಯಿದೆ ಎಂದು ಅವರು ಹೇಳಿದರು.
ಬಂಡವಾಳ ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ಕರ್ನಾಟಕ ರಾಜ್ಯ 2022-23ನೇ ಸಾಲಿನಲ್ಲಿ 4.67 ಟ್ರಿಲಿಯನ್ ಬಂಡವಾಳವನ್ನು ಆಕರ್ಷಿಸಿದೆ. ರಾಜ್ಯವು 400ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪೆನಿಗಳ ತಾಣವಾಗಿದೆ. 2 ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಗಳು, 47 ರಾಷ್ಟ್ರೀಯ ಹೆದ್ದಾರಿಗಳು, 145 ರಾಜ್ಯ ಹೆದ್ದಾರಿಗಳು, 3818 ಕಿ.ಮೀ ರೈಲ್ವೇ ಸಂಪರ್ಕ, 1 ದೊಡ್ಡ ಬಂದರು ಹಾಗೂ 13 ಸಣ್ಣ ಬಂದರುಗಳನ್ನು ಹೊಂದಿದೆ ಎಂದು ಅವರು ಹೇಳಿದರು.
ಇಡೀ ವಿಶ್ವದಲ್ಲೇ 2,050 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪಾರ್ಕ್ ಪಾವಗಡದಲ್ಲಿ ನಿರ್ಮಿಸಲಾಗಿದೆ. ಇವಿ ನೀತಿ ಪ್ರಕಟಿಸಲಾಗಿದೆ. ಬೆಂಗಳೂರು ನಗರವು ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ ನಲ್ಲಿ 16ನೆ ಸ್ಥಾನ ಪಡೆದಿದೆ. ಭಾರತದ ತಂತ್ರಜ್ಞಾನ ನಗರವಾಗಿ ಪರಿಗಣಿಸಲ್ಪಟ್ಟಿರುವ ಬೆಂಗಳೂರು, ಅಮೆರಿಕದ ಕಂಪೆನಿಗಳಿಗೆ ನೆಚ್ಚಿನ ತಾಣವಾಗಿದೆ ಎಂದು ಅವರು ಹೇಳಿದರು.
ಕೈಗಾರಿಕೆಗಳು ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ತುಮಕೂರು, ಬೆಳಗಾವಿ, ಕಲ್ಬುರ್ಗಿ ನಗರಗಳತ್ತಲೂ ಗಮನಹರಿಸಬೇಕಿದೆ. ಈ ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಐಟಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಈ ನಗರಗಳು ಉತ್ತಮ ಅವಕಾಶವನ್ನು ಸೃಷ್ಟಿಸಬಲ್ಲದು ಎಂದು ಶಿವಕುಮಾರ್ ತಿಳಿಸಿದರು.
ನಿಮ್ಮ ರಾಷ್ಟ್ರದ ಜತೆಗೆ ಉತ್ತಮ ಬಾಂಧವ್ಯ ಬೆಸೆದು ಸುಸ್ಥಿರ ಅಭಿವೃದ್ಧಿ ಹಾಗೂ ಪ್ರಗತಿ ಸಾಧಿಸಲು ನಾವು ಇಚ್ಛಿಸುತ್ತೇವೆ. ನಿಮ್ಮ ಭವಿಷ್ಯದ ಹೆಜ್ಜೆಯಲ್ಲಿ ನಾವು ಹೇಗೆ ನಿಮಗೆ ಸಹಕಾರ ನೀಡಬೇಕು ಎಂದು ತಿಳಿಯಲು ನಾವು ಉತ್ಸುಕರಾಗಿದ್ದೇವೆ. ನಾವು ಒಂದಾಗಿ ನಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳೋಣ ಎಂದು ಶಿವಕುಮಾರ್ ಕರೆ ನೀಡಿದರು.