×
Ad

ಪೆಟ್ರೋಲ್ ಬಂಕ್‍ಗಳ ದರ ಪಟ್ಟಿಯಲ್ಲಿ ಕನ್ನಡ: ಕೇಂದ್ರ ಸಚಿವ ಹರ್ದೀಪ್ ಸಿಂಗ್‍ಪುರಿ

Update: 2024-01-09 21:00 IST

Photo: X/@BYVijayendra

ಬೆಂಗಳೂರು: ಜ.10 ರಾಜ್ಯ ವ್ಯಾಪಿ ಪೆಟ್ರೋಲ್ ಬಂಕ್‍ಗಳಲ್ಲಿ ಇಂಧನ ದರ ಪಟ್ಟಿ ಕನ್ನಡದಲ್ಲೂ ಪ್ರದರ್ಶನ ಮಾಡಲಾಗುವುದು ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ʼಪೆಟ್ರೋಲ್ ಬಂಕ್‍ಗಳಲ್ಲಿ ದರ ಪಟ್ಟಿ ಕನ್ನಡದಲ್ಲಿ ಇರಲಿದೆ. ಕನ್ನಡದಲ್ಲಿ ದರ ಪಟ್ಟಿ ಪ್ರಕಟಿಸುವ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಜ.10ರಿಂದ ಜಾರಿಯಾಗಲಿದೆʼ ಎಂದು ತಿಳಿಸಿದರು.

ಜಗತ್ತಿನೆಲ್ಲೆಡೆ ಪೆಟ್ರೋಲಿಯಂ ಉತ್ಪನ್ನಗಳ ದರ ಏರುತ್ತಿದೆ. ಪ್ರಧಾನಿ ಮೋದಿ ಎರಡು ಬಾರಿ ಪೆಟ್ರೋಲಿಯಂ ಉತ್ಪನ್ನಗಳ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದಾರೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಳೆದ 2 ವರ್ಷಗಳಲ್ಲಿ ಕಡಿಮೆ ಆಗಿದೆ ಎಂದ ಅವರು, 2016ರಲ್ಲಿ ಆರಂಭವಾದ ಉಜ್ವಲ ಯೋಜನೆಯಡಿ 10.50 ಕೋಟಿ ಜನರಿಗೆ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಕೊಡಲಾಗಿದೆ. ಆವಾಸ್ ಯೋಜನೆಯಡಿ ಮಹಿಳೆಯರಿಗೆ ಆದ್ಯತೆ ಕೊಡಲಾಗಿದೆ. 11 ಕೋಟಿ ಶೌಚಾಲಯ ನಿರ್ಮಾಣ, ಮಹಿಳೆಯರಿಗೆ ಶೇ.33 ರಾಜಕೀಯ ಮೀಸಲಾತಿ ಕೊಡಲಾಗುತ್ತಿದೆ ಎಂದು ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಮೋಹನ್, ರಾಷ್ಟ್ರೀಯ ವಕ್ತಾರರಾದ ಝಫರ್ ಇಸಾಮ್, ತೂಹಿನ್ ಸಿನ್ಹಾ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಸೇರಿದಂತೆ ಪ್ರಮುಖರಿದ್ದರು.

ಇಂಡಿಯಾ ಒಕ್ಕೂಟಕ್ಕೆ ಸಂಚಾಲಕರನ್ನೆ ನೇಮಿಸಿಲ್ಲ: ಇಂಡಿಯಾ ಒಕ್ಕೂಟವು ಅಸ್ತಿತ್ವದಲ್ಲೇ ಇಲ್ಲ. ಆರಂಭದಲ್ಲಿ ಅದು ಪ್ರಧಾನಿ ಸ್ಥಾನಕ್ಕೆ ಹಲವಾರು ಹೆಸರುಗಳನ್ನು ಪ್ರಸ್ತಾಪ ಮಾಡಿತ್ತು. ಬಳಿಕ ಅವರು ಪರಸ್ಪರರನ್ನು ಸೂಚಿಸಿದರು. ಇನ್ನೊಂದೆಡೆ ಅವರಿಗೆ ಸ್ಥಾನ ಹಂಚಿಕೆ ಕಡೆಗೇ ಗಮನ ಕೊಡಲು ಅವರಿಗೆ ಸಾಧ್ಯವಾಗಿಲ್ಲ. ಜತೆಗೆ, ಅದಕ್ಕೆ ಸಂಚಾಲಕರನ್ನೆ ನೇಮಕ ಮಾಡಿಲ್ಲ ಎಂದು ಹರ್ದೀಪ್ ಸಿಂಗ್ ಪುರಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News