×
Ad

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಮಂಗಳೂರಿನ ಜೆರೋಸಾ ಶಾಲೆ ವಿಚಾರ

Update: 2024-02-15 12:11 IST

ಶಾಸಕ ಭರತ್ ಶೆಟ್ಟಿ

ಬೆಂಗಳೂರು, ಫೆ.15: ಮಂಗಳೂರಿನ ಸಂತ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಮೇಲಿನ ಹಿಂದೂ ಧರ್ಮದ ಅವಹೇಳನ ಆರೋಪ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.

ಬಜೆಟ್ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಂಗಳೂರು ಉತ್ತರ ಶಾಸಕ ಡಾ.ಕೆ.ಭರತ್ ಶೆಟ್ಟಿ, ಶಾಲೆಯಲ್ಲಿ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಿಕ್ಷಕಿ ವಿರುದ್ಧ ದೂರು ನೀಡಿದರೂ ಎಫ್.ಐ.ಆರ್. ದಾಖಲಾಗಿಲ್ಲ. ಆದರೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿಯನ್ನು ಶಿಕ್ಷಣ ಸಂಸ್ಥೆ ವಜಾ ಮಾಡಿದಾಗ ವಿದ್ಯಾರ್ಥಿಗಳು ಶಾಲೆ ಎದುರು 'ಜೈ ಶ್ರೀರಾಮ್ ಘೋಷಣೆ' ಕೂಗಿದಾಗ ಅಲ್ಲಿದ್ದವರ ಮೇಲೆ ಎಫ್.ಐ.ಆರ್. ದಾಖಲಾಗುತ್ತದೆ. ಅದೂ ಜಾಮೀನುರಹಿತ ಕಲಂ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದೆಷ್ಟು ಸರಿ ಅಂತ ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ಭರತ್ ಶೆಟ್ಟಿ, ಈ ಘಟನೆ ಶಾಲೆ ಎದುರು ನಡೆದಾಗ ತಾನು ಆ ಸ್ಥಳದಲ್ಲಿ ಇರಲೇ ಇಲ್ಲ. ಆದರೂ ತನ್ನ ಮೇಲೆ ಹೇಗೆ ಎಫ್.ಐ.ಆರ್. ದಾಖಲು ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಎಫ್.ಐ.ಆರ್. ಹಾಕಿದ ಕೂಡಲೇ ಯಾರೂ ಅಪರಾಧಿ ಆಗುವುದಿಲ್ಲ. ಶಾಲೆಯಲ್ಲಿನ ವಿಚಾರ ಮುಂದಿಟ್ಟು ಕೋಮು ಭಾವನೆ ಕೆರಳಿಸಲು ಪ್ರಯತ್ನ ನಡೆದಿದೆ ಎಂದರು.

ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಘಟನಾ ಸ್ಥಳದಲ್ಲಿ ಇಲ್ಲದೇ ಇದ್ದರೂ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್.ಐ.ಆರ್. ಆಗಿದೆ ಎಂದರೆ ಪೊಲೀಸರಿಗೆ ಮೇಲಿನಿಂದ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದರು.

ಎಫ್.ಐ.ಆರ್. ದಾಖಲಿಸಿರುವ ಇನ್ ಸ್ಪೆಕ್ಟರ್ ರನ್ನು ಅಮಾನತು ಮಾಡಬೇಕು ಎಂದು ಅಶೋಕ್ ಒತ್ತಾಯಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ, ಶಾಸಕ ಭರತ್ ಶೆಟ್ಟಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಉತ್ತರ ನೀಡುವುದಾಗಿ ಚರ್ಚೆಗೆ ಇತಿಶ್ರೀ ಹಾಡಿದರು.

ಉತ್ತರ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್

ಗುರುವಾರ ವಿಧಾನಸಭೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಉತ್ತರ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ‘ಸೈಂಟ್ ಜೆರೋಸಾ ಪ್ರೌಢಶಾಲೆ ಬಳಿ ನಡೆದಂತಹ ಪ್ರತಿಭಟನೆ ಸಂದರ್ಭದಲ್ಲಿ ಭರತ್ ಶೆಟ್ಟಿ ಅಲ್ಲಿರಲಿಲ್ಲ ಎಂಬುದನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಆದರೆ, ಡಿಡಿಪಿಐ ಕಚೇರಿ ಬಳಿ ಅವರು ಪ್ರಚೋಧನಾತ್ಮಕವಾಗಿ ಮಾತನಾಡಿದ್ದಾರೆ’ ಎಂದು ತಿಳಿದು ಬಂದಿದೆ ಎಂದರು.

‘ಸ್ಥಳದಲ್ಲಿ ಇರದೆ ಇದ್ದ ಶಾಸಕರ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ’ ಎಂದರೆ ಇದು ಉದ್ದೇಶಪೂರ್ವಕವಾಗಿ, ದ್ವೇಷದಿಂದ ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಶಾಸಕರ ವಿರುದ್ಧ ಸುಳ್ಳು ಎಫ್‍ಐಆರ್ ಹಾಕಿರುವ ಪೊಲೀಸ್ ಅಧಿಕಾರಿಯನ್ನು ತಕ್ಷಣ ಅಮಾನತ್ತುಗೊಳಿಸಬೇಕು’ ಎಂದು ಬಿಜೆಪಿ ಸದಸ್ಯರೆಲ್ಲ ಒತ್ತಾಯಿಸಿದರು.

‘ಆದರೆ, ಈ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬರಲು ತನಿಖೆ ನಡೆಯಲಿ. ಶಾಸಕರು ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಸ್ವತಃ ನಾನೇ ಸದನದಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ’ ಎಂದು ಪರಮೇಶ್ವರ್ ಹೇಳಿದರು. ಈ ವೇಳೆ ಕೆಲಕಾಲ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರೂ, ಅದೇ ಸಂದರ್ಭದಲ್ಲಿ ಸ್ಪೀಕರ್ ಸ್ಥಾನದಲ್ಲಿ ಆಸೀನರಾಗಿದ್ದ ಮಹಾಂತೇಶ್ ಕೌಜಲಗಿ ಸದನವನ್ನು ನಾಳೆ ಬೆಳಗ್ಗೆ 10.15ಕ್ಕೆ ಸೇರುವಂತೆ ಮುಂದೂಡಿದರು.

ಅನಿಲ್ ಜೆರಾಲ್ಡ್ ಲೋಬೋ ದೂರಿನಲ್ಲಿ ಏನಿದೆ?: ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಅನಿಲ್ ಜೆರಾಲ್ಡ್ ಲೋಬೋ ಎಂಬವರು ಫೆ.14ರಂದು ನೀಡಿದ ದೂರಿನಲ್ಲಿ ಮಂಗಳೂರು ನಗರದ ವೆಲೆನ್ಸಿಯಾ ಸೈಂಟ್ ಜೆರೋಸಾ ಹೈಸ್ಕೂಲ್‍ನ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬವರು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಮಯದಲ್ಲಿ ಹಿಂದೂ ದೇವರನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೋ ವೈರಲ್ ಆಗಿದೆ.

ಆದರೆ, ಸಿಸ್ಟರ್ ಪ್ರಭಾ ಯಾವುದೇ ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಶಾಲಾ ಆಡಳಿತ ಮಂಡಳಿಯ ಜೊತೆ ವಿಚಾರ ವಿಮರ್ಶೆ ಮಾಡದೆ ಫೆ.12ರಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಬಜರಂಗ ದಳದ ಮುಖಂಡ ಶರಣ್ ಪಂಪ್‍ವೇಲ್, ಪಾಲಿಕೆ ಸದಸ್ಯರಾದ ಸಂದೀಪ್ ಗರೋಡಿ ಹಾಗೂ ಭರತ್ ಕುಮಾರ್ ಶಾಲೆಯ ಬಳಿ ಅಕ್ರಮವಾಗಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.

ಶಾಲಾ ಗೇಟ್ ಎದುರಲ್ಲಿ ಅಕ್ರಮವಾಗಿ ಸೇರಿ ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಿ, ಕ್ರಿಶ್ಚಿಯನ್ ಧರ್ಮದ ವಿರುದ್ಧ ಮಾತನಾಡಿ, ಶಾಲಾ ಆಡಳಿತ ಮಂಡಳಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸುವಂತೆ ಪ್ರಚೋದಿಸಿದ್ದಾರೆ. ಹಾಗೆಯೇ, ಶಾಲಾ ಆಡಳಿತ ಮಂಡಳಿಯ ವಿರುದ್ಧ ಮಾತನಾಡಿ ಬೆದರಿಕೆ ಹಾಕಿದ್ದಾರೆ.

ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದ ಸಮುದಾಯದಗಳ ನಡುವೆ ಕದನ, ಗಲಭೆ ಉಂಟಾಗುವಂತೆ ಪ್ರಚೋದಿಸಿ ಮಾತನಾಡಿದ್ದಾರೆ. ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮತೆಯಲ್ಲಿ ನೆಲೆಸಿರುವ ಶಾಂತಿ ಮತ್ತು ನೆಮ್ಮದಿಗೆ ಭಂಗ ತರಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 32/2024 ಅಡಿಯಲ್ಲಿ ಐಪಿಸಿ ಕಲಂ: 143, 153ಎ, 295ಎ, 505(2), 506 ಜೊತೆಗೆ 149 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

‘ಭರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲಿಸ್ ಅಧಿಕಾರಿಯನ್ನು ಅಮಾನತು ಮಾಡಬೇಕು. ಈ ಘಟನೆ ಕುರಿತು ಮೊದಲು ಮಕ್ಕಳು ದೂರು ಕೊಟ್ಟಾಗ ಪ್ರಾಥಮಿಕ ವಿಚಾರಣೆಯಲ್ಲಿ ತಪ್ಪು ಕಂಡು ಬಂದಿಲ್ಲ ಎಂದು ಎಫ್‍ಐಆರ್ ಮಾಡಿಲ್ಲ ಅಂತೀರಾ. ಶಾಸಕರ ವಿರುದ್ಧ ಯಾವುದೇ ವಿಚಾರಣೆ ಮಾಡದೆ ಎಫ್‍ಐಆರ್ ಹಾಕಿದ್ದಾರೆ. ಪೊಲೀಸರು ತಮ್ಮ ಕೆಲಸದಲ್ಲಿ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಶಿಕ್ಷಕಿಯನ್ನು ಆ ಶಾಲೆಯ ಆಡಳಿತ ಮಂಡಳಿ ಅಮಾನತು ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಸರಕಾರ ಈ ವಿಚಾರದಲ್ಲಿ ನ್ಯಾಯಯುತವಾದ ತೀರ್ಮಾನ ಮಾಡಿದರೆ ಮಾತ್ರ ಗೌರವ ಬರುತ್ತದೆ’

-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News