×
Ad

ʼಜಾತಿಗಣತಿʼ ಮರು ಸಮೀಕ್ಷೆ ಸ್ವಾಗತಿಸಿದ ರಾಜ್ಯ ಒಕ್ಕಲಿಗರ ಸಂಘ

Update: 2025-06-13 18:22 IST

ಬೆಂಗಳೂರು : ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ(ಜಾತಿಗಣತಿ) ಸಮೀಕ್ಷೆಯನ್ನು ಪುನಃ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ ಎಂದು ರಾಜ್ಯ ಒಕ್ಕಲಿಗರ ಸಂಘ ತಿಳಿಸಿದೆ.

ಶುಕ್ರವಾರ ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯು ವೈಜ್ಞಾನಿಕವಾಗಿಲ್ಲ. ಮರುಸಮೀಕ್ಷೆ ಮಾಡಬೇಕು ಎಂಬ ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು.

ಈ ಹಿಂದೆ ನಡೆಸಿದ್ದ ಜಾತಿ ಗಣತಿಯು ವೈಜ್ಞಾನಿಕವಾಗಿಲ್ಲ. ಮನೆ-ಮನೆಗೆ ಹೋಗಿ ಸಮೀಕ್ಷೆ ಮಾಡಿಲ್ಲ. ಕಾಂತರಾಜು ಆಯೋಗದ ಸಮೀಕ್ಷೆ 10 ವರ್ಷಗಳಷ್ಟು ಹಳೆಯ ದತ್ತಾಂಶಗಳನ್ನು ಒಳಗೊಂಡಿದ್ದು, ಮರು ಸಮೀಕ್ಷೆಯನ್ನು ಸರಕಾರ ನಡೆಸಬೇಕೆಂದು ಸಂಘದಿಂದ ಒತ್ತಾಯಿಸಲಾಗಿತ್ತು. ಸರಕಾರ ಹಳೆಯದಾದ ವರದಿ ಅನುಷ್ಠಾನ ಮಾಡಲು ಮುಂದಾದರೆ, ಸಂಘವು ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದೆವು ಎಂದು ಬಿ.ಕೆಂಚಪ್ಪಗೌಡ ಹೇಳಿದರು.

ಜಾತಿ ಗಣತಿ ವಿಚಾರದಲ್ಲಿ ಸರಕಾರ ಮರುಸಮೀಕ್ಷೆ ನಡೆಸುವ ತೀರ್ಮಾನಕ್ಕೆ ಬಂದಿರುವುದು ಸಮಂಜಸವಾಗಿದೆ. ನಾವು ಇದುವರೆಗೂ ಪ್ರಸ್ತಾಪ ಮಾಡುತ್ತಿದ್ದ ವಿಚಾರಗಳನ್ನೇ ಮುಂದಿಟ್ಟು ಮರು ಸಮೀಕ್ಷೆಗೆ ಸೂಚಿಸಲಾಗಿದೆ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುವುದಕ್ಕೆ ಮತ್ತು ವೈಜ್ಞಾನಿಕ ವರದಿ ಅನುಷ್ಠಾನಕ್ಕೆ ನಮ್ಮ ವಿರೋಧವಿಲ್ಲ ಎಂದು ಬಿ.ಕೆಂಚಪ್ಪಗೌಡ ತಿಳಿಸಿದರು.

ಮರು ಸಮೀಕ್ಷೆಯನ್ನು ವೈಜ್ಞಾನಿಕ, ಪಾರದರ್ಶಕವಾಗಿ, ಪ್ರತಿ ಮನೆಗಳಿಗೆ ಭೇಟಿ ನೀಡಿ ಜಾತಿವಾರು ಮಾಹಿತಿ ಸಂಗ್ರಹಿಸಬೇಕು. ಆನ್‍ಲೈನ್ ಮೂಲಕವೂ ಅವಕಾಶ ಕಲ್ಪಿಸುವುದಾಗಿ ಸರಕಾರ ಪ್ರಕಟಿಸಿದೆ. ಹಿಂದಿನ ಗಣತಿಯ ಸಂದರ್ಭದಲ್ಲಿ ಆಗಿದ್ದ ಲೋಪದೋಷಗಳನ್ನು ಸರಿಪಡಿಸಿಕೊಂಡು ಎಲ್ಲರಿಗೂ ಒಪ್ಪಿತವಾಗುವ ವರದಿ ಪಡೆಯಲಿ ಎಂಬುದೇ ನಮ್ಮ ಆಶಯ ಎಂದು ಬಿ.ಕೆಂಚಪ್ಪಗೌಡ ಹೇಳಿದರು.

ಒಕ್ಕಲಿಗರ ಸಂಘದಿಂದಲೂ ನಮ್ಮ ಸಮುದಾಯದ ಡಿಜಿಟಲ್ ಸರ್ವೆ ಮಾಡಿಸುತ್ತೇವೆ. ಮರು ಸಮೀಕ್ಷೆಯಲ್ಲೂ ಸರಕಾರ ಲೋಪವೆಸಗಿದರೆ ನಮ್ಮ ಹೋರಾಟ ಮಾಡುತ್ತೇವೆ ಎಂದು ಬಿ.ಕೆಂಚಪ್ಪಗೌಡ ತಿಳಿಸಿದರು.

ಈ ವೇಳೆ ಸಂಘದ ಪದಾಧಿಕಾರಿಗಳಾದ ಕೋನಪ್ಪರೆಡ್ಡಿ, ಯಲುವಳ್ಳಿ ರಮೇಶ್, ಎಲ್. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News