×
Ad

ಬೃಹತ್ ಸಭೆ, ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ವಿಧೇಯಕ : ಸಂಪುಟದಲ್ಲಿ ಚರ್ಚೆ

Update: 2025-06-19 21:14 IST

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ದುರಂತದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರವು, ಬೃಹತ್ ಸಭೆ, ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಜನಸಂದಣಿ ನಿಯಂತ್ರಣ ಮಾಡುವ ಸಂಬಂಧ ಹೊಸ ಕಾನೂನು ತರಲು ಮುಂದಾಗಿದೆ.

ಈ ಸಂಬಂಧ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಬೃಹತ್ ಸಭೆ, ಸಮಾರಂಭಗಳ ಸ್ಥಳಗಳಲ್ಲಿ ಜನಸಂದಣಿ ನಿಯಂತ್ರಣ ವಿಧೇಯಕ-2025’ ಅನ್ನು ಮಂಡಿಸಿ ಔಪಚಾರಿಕ ಚರ್ಚೆ ನಡೆಸಲಾಗಿದೆ. ಅಲ್ಲದೇ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ವಿಧೇಯಕಕ್ಕೆ ಅನುಮೋದನೆ ಪಡೆದುಕೊಳ್ಳಲು ಯೋಜಿಸಲಾಗಿದೆ.

ವಿಧೇಯಕದಲ್ಲಿ ಏನಿದೆ?: ಪ್ರಮುಖವಾಗಿ ಕ್ರೀಡಾಕೂಟಗಳು, ರಾಜಕೀಯ ರ್ಯಾಲಿಗಳು, ಸರ್ಕಸ್ ಸೇರಿದಂತೆ ವಾಣಿಜ್ಯ ಉದ್ದೇಶದಿಂದ ಆಯೋಜಿಸಲಾಗುವು ಕಾರ್ಯಕ್ರಮಗಳಿಗೆ ಬಿಗಿ ನಿಯಮಗಳನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ. ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಥವಾ ನಡೆಯುವಾಗ ಜನರನ್ನು ನಿಯಂತ್ರಿಸುವಲ್ಲಿ ವಿಫಲರಾದಲ್ಲಿ ಅವರಿಗೆ ಮೂರು ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ಐದು ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ವಿಧೇಯಕದಲ್ಲಿ ಪ್ರಸ್ತಾವಿಸಲಾಗಿದೆ ಎಂದು ತಿಳಿದು ಬಂದಿದೆ.

ಆಯೋಜಕರು ಕಾರ್ಯಕ್ರಮ ನಡೆಯುವ ಸ್ಥಳ ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆಯೋ ಅಲ್ಲಿ ಅರ್ಜಿ ಹಾಕಿ ಅನುಮತಿ ಪಡೆಯಬೇಕು. ಒಂದು ವೇಳೆ ಕಾರ್ಯಕ್ರಮಗಳಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದರೆ, ಸಾವು-ನೋವು ಸಂಭವಿಸಿದರೆ ಅದಕ್ಕೆ ಆ ಕಾರ್ಯಕ್ರಮದ ಆಯೋಜಕರನ್ನೆ ಜವಾಬ್ದಾರರನ್ನಾಗಿಸಲು ಉದ್ದೇಶಿಸಲಾಗಿದೆ. ಅಷ್ಟೇ ಅಲ್ಲ, ಗಾಯಾಳುಗಳು, ಮೃತರ ಕುಟುಂಬಗಳಿಗೆ ಪರಿಹಾರ ನೀಡದಿದ್ದರೆ ಆಯೋಜಕರ ಆಸ್ತಿ ಹರಾಜು ಮೂಲಕ ಪರಿಹಾರ ವಸೂಲು ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ, ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪದ ತೇರು, ಉರೂಸ್ ಅಥವಾ ಯಾವುದೇ ಧರ್ಮ, ಜಾತಿ ಅಥವಾ ಪಂಥಕ್ಕೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News