ಹಾಸನದಲ್ಲಿ ಸಂಭವಿಸಿದ ಸರಣಿ ಹೃದಯಾಘಾತಗಳ ಕುರಿತ ತಜ್ಞರ ತನಿಖಾ ವರದಿ ಸಲ್ಲಿಕೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಮಾಧ್ಯಮಗಳಲ್ಲಿ ವರದಿಯಾದಂತೆ ಹಾಸನ ಜಿಲ್ಲೆಯಲ್ಲಿ ಮೇ ಮತ್ತು ಜೂನ್ ತಿಂಗಳಿನಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ, ಬದಲಾಗಿ ಹಿಂದಿನ ತಿಂಗಳುಗಳಲ್ಲಿ ಸಂಭವಿಸಿದ್ದ ಹೃದಯಾಘಾತ ಪ್ರಕರಣಗಳಷ್ಟೇ 2025ರ ಮೇ ಮತ್ತು ಜೂನ್‍ನಲ್ಲಿ ಇದೆ ಎಂದು ತಜ್ಞರ ತನಿಖಾ ವರದಿಯು ಸ್ಪಷ್ಟಪಡಿಸಿದೆ.
ಹಾಸನದಲ್ಲಿ ಸಂಭವಿಸಿದ ಸರಣಿ ಹೃದಯಾಘಾತಗಳ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹಾಸನದ ಸರಣಿ ಹೃದಯಾಘಾತಗಳ ಕುರಿತು ತನಿಖೆಯನ್ನು ನಡೆಸಲು ಇಲ್ಲಿನ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯು 2025ರ ಮೇ-ಜೂನ್ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ 24 ಸಾವುಗಳನ್ನು ವಿಶ್ಲೇಷಿಸುವ ಮತ್ತು ಜಿಲ್ಲೆಯಲ್ಲಿ ಹೃದಯ ಸಂಬಂಧಿ ಪ್ರಕರಣಗಳು ಹಾಗೂ ಸಾವುಗಳ ಕುರಿತು ಅಧ್ಯಯನ ನಡೆಸಿ, ಗುರುವಾರದಂದು ಸರಕಾರಕ್ಕೆ ವರದಿಯನ್ನು ಸಲ್ಲಿಸಿದೆ.
ಹಾಸನದಲ್ಲಿ ಮೇ ಮತ್ತು ಜೂನ್ ತಿಂಗಳಿನಲ್ಲಿ ಸಂಭವಿಸಿದ್ದ 24 ಅನುಮಾನಾಸ್ಪಾದ ಹೃದಯಾಘಾತ ಸಾವುಗಳು ಬಗ್ಗೆ ಸಮಿತಿಯು ತನಿಖೆ ನಡೆಸಿದೆ. 24 ಮಂದಿ ಪೈಕಿ 4 ಮಂದಿಗೆ ಯಾವುದೇ ಹೃದ್ರೋಗಗಳು ಪತ್ತೆಯಾಗಿರಲಿಲ್ಲ. 10 ಮಂದಿ ಯಾವುದೇ ಅನುಮಾನವಿಲ್ಲದೆ ಹೃದಯಾಘಾತದಿಂದ ಮೃತಪಟ್ಟಿದ್ದು, ಉಳಿದ ಹತ್ತು ಮಂದಿ ಸಂಭವನೀಯ ಹೃದಯಾಘಾತದಿಂದ ಸತ್ತಿರಬಹುದು ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ ಹೃದಯಘಾತ ಸಂಭವಿಸಿದವರ ಪೈಕಿ ಶೇ.75ರಷ್ಟು ಮಂದಿಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಹೃದಯಾಘಾತದ ಅಪಾಯಕಾರಿ ಅಂಶಗಳು ಪತ್ತೆಯಾಗಿವೆ. ಮೂರು ಮಂದಿಯಲ್ಲಿ ಮೊದಲೇ ಹೃದಯ ಸಂಬಂಧಿ ರೋಗಗಳಿದ್ದವು. ಆರು ಮಂದಿ ಧೂಮಪಾನಿಗಳಾಗಿದ್ದು, 8 ಮಂದಿ ಮದ್ಯಪಾನಿಗಳಾಗಿದ್ದರು. 7 ಮಂದಿ ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದರು. 6 ಮಂದಿಯಲ್ಲಿ ಅಧಿಕ ರಕ್ತದೊತ್ತಡ ಕಂಡು ಬಂದಿತ್ತು. 8 ಮಂದಿಯಲ್ಲಿ ಬೊಜ್ಜು ಕಂಡು ಬಂದಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಸನದಲ್ಲಿ 2024ರ ಮೇ ಮತ್ತು ಜೂನ್ ತಿಂಗಳಿನಲ್ಲಿ 19 ಮಂದಿ, 2025ರ ಮೇ ಮತ್ತು ಜೂನ್ ತಿಂಗಳಿನಲ್ಲಿ 20 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 2025ರ ಜನವರಿಯಲ್ಲಿ 11 ಮಂದಿ, ಫೆಬ್ರವರಿಯಲ್ಲಿ 10, ಮಾರ್ಚ್‍ನಲ್ಲಿ 10, ಎಪ್ರಿಲ್ 9, ಮೇ 9 ಮತ್ತು ಜೂನ್‍ನಲ್ಲಿ 11 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ಬೆಂಗಳೂರಿನ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಮೈಸೂರು ಮತ್ತು ಕಲಬುರಗಿಯಲ್ಲಿರುವ ಕೇಂದ್ರಗಳಲ್ಲಿ ಆರು ತಿಂಗಳ ದತ್ತಾಂಶವನ್ನು ಪರಿಶೀಲಿಸಿದ್ದು, ಮೇ ಮತ್ತು ಜೂನ್‍ನಲ್ಲಿ ಸಂಭವಿಸಿದ ಹೃದಯಾಘಾತ ಸಾವುಗಳ ಸಂಖ್ಯೆ ಉಳಿದ ತಿಂಗಳಿಗಿಂತಲೂ ಹೆಚ್ಚಳವಾಗಿಲ್ಲ ಎಂದು ಸಮಿತಿಯು ತಿಳಿಸಿದೆ.
ಬೆಂಗಳೂರಿನ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜನವರಿಯಲ್ಲಿ 97, ಫೆಬ್ರವರಿ 80, ಮಾರ್ಚ್ 96, ಎಪ್ರಿಲ್ 84, ಮೇ 78 ಮತ್ತು ಜೂನ್‍ನಲ್ಲಿ 77 ಮಂದಿ ಹೃದ್ರೋಗದಿಂದ ಮೃತಪಟ್ಟಿದ್ದಾರೆ. ಮೈಸೂರು ಕೇಂದ್ರದಲ್ಲಿ ಜನವರಿಯಲ್ಲಿ 83, ಫೆಬ್ರವರಿ 69, ಮಾರ್ಚ್ 52, ಎಪ್ರಿಲ್ 60, ಮೇ 62 ಮತ್ತು ಜೂನ್‍ನಲ್ಲಿ 49 ಮಂದಿ ಹೃದ್ರೋಗದಿಂದ ಮೃತಪಟ್ಟಿದ್ದಾರೆ. ಕಲಬುರಗಿಯ ಕೇಂದ್ರದಲ್ಲಿ ಜನವರಿಯಲ್ಲಿ 11, ಫೆಬ್ರವರಿ 19, ಮಾರ್ಚ್ 21, ಎಪ್ರಿಲ್ 21, ಮೇ 23 ಮತ್ತು ಜೂನ್‍ನಲ್ಲಿ 28 ಮಂದಿ ಹೃದ್ರೋಗದಿಂದ ಮೃತಪಟ್ಟಿದ್ದಾರೆ.
ಹೃದಯರಕ್ತನಾಳದ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಿರಿಯ ವಯಸ್ಕರಲ್ಲಿ ಹಠಾತ್ ಮರಣಗಳು ಸಂಭವಿಸುತ್ತಿವೆ. ಹೀಗಾಗಿ ಯುವಕರಲ್ಲಿ ಆರಂಭಿಕ ಹೃದಯರಕ್ತನಾಳದ ತಪಾಸಣೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಾಗೆಯೇ ಆರೋಗ್ಯ ಶಿಕ್ಷಣವನ್ನು ನೀಡಬೇಕು. ಆರೋಗ್ಯವಂತ ಯುವಕರ ಎಲ್ಲ ಹಠಾತ್ ಸಾವುಗಳಿಗೆ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಎಲ್ಲ ರೀತಿಯ ತನಿಖಾ ಪ್ರೊಟೋಕಾಲ್‍ಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.