×
Ad

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಕಡ್ಡಾಯ ಶುಲ್ಕ ವಸೂಲಿ ಮಾಡುವಂತಿಲ್ಲ: ಸರಕಾರ ಆದೇಶ

Update: 2023-07-04 23:04 IST

ಬೆಂಗಳೂರು, ಜು.4: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಹಾಗೂ ಉನ್ನತ ಶಿಕ್ಷಣದಲ್ಲಿ ವಂಚಿತರಾಗಬಾರದೆಂಬ ಉದ್ದೇಶದಿಂದ ಪ್ರವೇಶಾತಿ ಸಮಯದಲ್ಲಿ ಕಡ್ಡಾಯ ಶುಲ್ಕಗಳನ್ನು ಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಸರಕಾರ ಆದೇಶ ಹೊರಡಿಸಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಮಂಜೂರಾಗುವ ಶುಲ್ಕದ ಮೊತ್ತವನ್ನು ವಿದ್ಯಾರ್ಥಿಯು ಕಡ್ಡಾಯವಾಗಿ ಕಾಲೇಜಿಗೆ ಪಾವತಿ ಮಾಡಬೇಕಾಗಿರುತ್ತದೆ. ಸಮಾಜ ಕಲ್ಯಾಣ ಇಲಾಖೆಯು ಡಿಬಿಟಿ ಮೂಲಕ ವಿದ್ಯಾರ್ಥಿಗಳಿಗೆ ಪಾವತಿಸಿದ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿಕೊಂಡು ನಂತರ ವಿದ್ಯಾರ್ಥಿಯಿಂದ ಮೊತ್ತವನ್ನು ಪಾವತಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದೆ.

ಕೌನ್ಸಿಲಿಂಗ್ ಸೀಟುಗಳಿಗೆ ಸಂಬಂಧಿಸಿದಂತೆ ಸರಕಾರಿ ಕೋಟಾ ಸೀಟುಗಳಿಗೆ ವಿಶ್ವವಿದ್ಯಾಲಯ ಹಾಗೂ ಕೆಇಎ ನಿಗಧಿಪಡಿಸಿದ ಶುಲ್ಕಗಳನ್ನು ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಮಂಜೂರು ಮಾಡಲು ಕ್ರಮ ವಹಿಸಲಾಗಿದ್ದು, ಸರಕಾರಿ ಕೋಟಾ ಸೀಟಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಂದ ಇತರೆ ಯಾವುದೇ ಶುಲ್ಕಗಳನ್ನು ವಸೂಲು ಮಾಡುವಂತಿಲ್ಲ ಎಂದು ತಿಳಿಸಿದೆ.

ವಿದ್ಯಾರ್ಥಿಯು ಆಯಾ ಕೋರ್ಸಿಗೆ ದಾಖಲಾದ ದಿನದಿಂದಲೇ ವಿದ್ಯಾರ್ಥಿಗೆ ವಿಶ್ವವಿದ್ಯಾಲಯದ ರಿಜಿಸ್ಟರ್ ನಂಬರ್ ಅನ್ನು ನಿಡಬೇಕು. ದಾಖಲಾದ ದಿನದಿಂದಲೇ ವಿದ್ಯಾರ್ಥಿಯು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಡಬೇಕು ಎಂದು ನಿರ್ದೇಶನ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News