ಸರಕಾರದಲ್ಲಿ ಯಾವುದೇ ಬಣ ಇಲ್ಲ: ಸತೀಶ್ ಜಾರಕಿಹೊಳಿ
Update: 2023-10-16 19:27 IST
ಸತೀಶ್ ಜಾರಕಿಹೊಳಿ
ಬೆಂಗಳೂರು: ‘ಸರಕಾರ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ಇಲ್ಲ. ಇದು ಎಲ್ಲವೂ ಸೃಷ್ಟಿಸಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾನ ಮನಸ್ಕ ಶಾಸಕರು ದಸರಾ ಆಚರಣೆಗಾಗಿ ಮೈಸೂರಿಗೆ ಹೋಗಬೇಕೆನ್ನುವ ಆಲೋಚನೆ ಇತ್ತು. ಈ ಸಂಬಂಧ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ. ಆದರೆ, ನಮ್ಮಲ್ಲಿ ಯಾವುದೇ ಬಣ ಇಲ್ಲ, ಎಲ್ಲರೂ ಒಂದಾಗಿದ್ದೇವೆ ಎಂದು ನುಡಿದರು.
ಗುತ್ತಿಗೆದಾರರ ಬಾಕಿ ಬಿಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಲ್ ಬಾಕಿ ಉಳಿಸಿಕೊಂಡಿರುವುದು ಹಿಂದಿನ ಬಿಜೆಪಿ ಸರಕಾರ. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಒಂದೊಂದಾಗಿ ಹಣ ಬಿಡುಗಡೆ ಆಗಲಿದೆ. ಅಲ್ಲದೆ, ಪರಿಶೀಲನೆ ನಡೆಸಿದ ಬಳಿಕವೇ ಹಣ ಬಿಡುಗಡೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.