ಸುಳ್ಳನ್ನೇ ಚಾಳಿ ಮಾಡಿಕೊಂಡಿರುವ ಪ್ರಧಾನಿ ಮೋದಿಯ ಪ್ರವಾಸದಿಂದ ನಿರೀಕ್ಷಿಸಬಹುದಾದ ಫಲಿತಾಂಶ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
PC: x.com/kharge
ಕಲಬುರಗಿ: ಮೋದಿ ಮತ್ತು ಟ್ರಂಪ್ ಸ್ನೇಹಿತರಾಗಿದ್ದರೆ ಫೋನ್ ನಲ್ಲೇ ದೇಶದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಮ್ಮ ದೇಶದ ವಲಸಿಗರನ್ನು ಸಾಮಾನ್ಯ ಗೂಡ್ಸ್ ಫ್ಲೈಟ್ ನಲ್ಲಿ ಕಳುಹಿಸಬೇಡಿ ಎಂದು ಹೇಳಬೇಕಿತ್ತು. ನಿಮ್ಮ ಸ್ವಂತ ಪ್ಯಾಸೆಂಜರ್ ಫ್ಲೈಟ್ ನಲ್ಲಿ ಕಳ್ಸಿ ಅನ್ನಬಹುದಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಂಪ್ ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಿರುವ ಮೋದಿಯವರಿಗೆ ಮೊದಲು ಅಮೆರಿಕಾದ ಆಹ್ವಾನವಿರಲಿಲ್ಲ. ಮೊದಲು ವಿದೇಶಾಂಗ ಸಚಿವ ಜೈಶಂಕರ ಹಾಗೂ ಇನ್ನಿತರರು ಹೋಗಿದ್ದಾರೆ. ಈಗ ಆಹ್ವಾನ ಬಂದ ಮೇಲೆ ಮೋದಿ ಹೋಗ್ತಿದ್ದಾರೆ ಎಂದರು.
ಟ್ರಂಪ್ ಕ್ಲೋಸ್ ಇದ್ದಾನೆ. ಫ್ರೆಂಡ್ ಇದ್ದಾನೆ ಅಂತೆಲ್ಲಾ ಹೇಳಿಕೊಳ್ತಿರಿ. ಅವರು ನಿಮ್ಮ ಫ್ರೆಂಡ್ ಇರಬಹುದು. ನಮ್ಮ ದೇಶದ ಫ್ರೆಂಡ್ ಇರಬೇಕಲ್ವಾ ? ನಿಮ್ಮ ಫ್ರೆಂಡ್ ಇದ್ದವರು ಅದೇ ಕಾಳಜಿ ದೇಶದ ಬಗ್ಗೆ ವಹಿಸ್ತಾರೆ ಅಂತಲ್ಲ. ಮೋದಿ ಯಾವಾಗಲೂ ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಆದ್ದರಿಂದ ಮೋದಿ ಪ್ರವಾಸದಿಂದ ಅಂತಹ ಫಲಿತಾಂಶ ಏನೂ ಬರೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಆರಂಭದಲ್ಲೇ ಮೋದಿ ದೋಸ್ತ್ ಹೆದರಿಸ್ತಿದಾನೆ. ಇಂಪೋರ್ಟ್ ಟೆರಿಫ್ ಹೆಚ್ಚಳ ಮಾಡುವ ಬಗ್ಗೆ ಈಗಾಗಲೇ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಟ್ರಂಪ್ ನಿಂದ ನಮ್ಮ ದೇಶಕ್ಕೆ ಹೇಗೆ ಒಳ್ಳೆಯದಾಗುತ್ತೆ ಅಂತ ನಂಬೋದು ?. ನಮ್ಮ ಇಂಜಿನಿಯರಗಳು, ಡಾಕ್ಟರ್ ಗಳನ್ನು ಯಾವಾಗ ಬೇಕೋ ಅವಾಗ ತಗೊಳ್ಳೋದು ನಂತರ ನಿರ್ಬಂದ ಹಾಕೋದು ಸರಿನಾ ? ಎಂದು ಪ್ರಶ್ನಿಸಿದರು.
ಪರಮೇಶ್ವರ, ಜಾರಕಿಹೊಳಿ ಭೇಟಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರೆಲ್ಲೇನು ವಿಶೇಷ ಇಲ್ಲ. ಈ ಬಗ್ಗೆ ಮಾಧ್ಯಮದವರು ಗೊಂದಲ ಸೃಷ್ಟಿ ಮಾಡಬೇಡಿ. ಡಿಸಿಎಂ ಡಿ.ಕೆ ಶಿವಕುಮಾರ, ಸಚಿವ ಪರಮೇಶ್ವರ ಬರುತ್ತಾರೆ. ಸಿಎಂ ಸಿದ್ದರಾಮಯ್ಯ ಫೋನ್ ಮಾಡ್ತಾರೆ. ಇದೆಲ್ಲ ಸಾಮಾನ್ಯ. ನಾನು ಈ ರಾಜ್ಯದವನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಹೀಗಾಗಿ ನಮ್ಮ ರಾಜ್ಯದ ನಾಯಕರು ನನ್ನ ಭೇಟಿಯಾಗೋಕೆ ಬರುತ್ತಾರೆ. ನಮ್ಮ ಜೊತೆ ಆತ್ಮೀಯರಿರುವವರು ಫೋನ್ ಮಾಡಿ ಬರ್ತಾರೆ. ಬೇಡ ಅನ್ನೋಕ್ಕಾಗುತ್ತಾ ಎಂದು ಪ್ರಶ್ನಿಸಿದರು.