ಭಾರತ್ ಬಂದ್ ಬೆಂಬಲಿಸಿ ರಾಜ್ಯದ ವಿವಿಧೆಡೆಗಳಲ್ಲಿ ಕಾರ್ಮಿಕರ ಮುಷ್ಕರ
ಬೆಂಗಳೂರು: ಕೇಂದ್ರ ಕಾರ್ಮಿಕ ಸಂಘಗಳ ಒಕ್ಕೂಟ ಕರೆ ನೀಡಿದ್ದ ರಾಷ್ಟ್ರ ವ್ಯಾಪಿ ಭಾರತ್ ಬಂದ್‍ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಪ್ರತಿಭಟನೆಗೆ ಸೀಮಿತವಾಗಿತ್ತು.
ಭಾರತ್ ಬಂದ್ ಕರೆ ನಡುವೆಯೂ ಬುಧವಾರ ಬೆಂಗಳೂರು, ಮಂಗಳೂರು, ಕೋಲಾರ, ಮೈಸೂರು, ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಶಾಲಾ-ಕಾಲೇಜು ಆರಂಭಗೊಂಡವು. ವ್ಯಾಪಾರ ವಹಿವಾಟು ಸಾಮಾನ್ಯವಾಗಿತ್ತು. ಸರಕಾರಿ ಬಸ್ ಸಂಚಾರ, ಆಟೊಗಳು ರಸ್ತೆಗಿಳಿದಿದ್ದವು.
ಬಂದ್ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನ ಮೈದಾನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಸಾವಿರಾರು ಕಾರ್ಮಿಕರು, ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಲೇಬರ್ ಕೋಡ್‍ಗಳನ್ನು ರದ್ದುಪಡಿಸಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ, ರಾಜ್ಯ ಸರಕಾರ ಮಹಿಳೆಯರಿಗೆ ರಾತ್ರಿ ಪಾಳಿ, ಅಪಾಯಕಾರಿ ಉದ್ದಿಮೆಗಳಿಗೆ ಮಹಿಳೆಯರಿಗೆ ಇದ್ದ ರಿಯಾಯಿತಿ ತೆಗೆಯುವುದು, ಕೆಲಸದ ಅವಧಿ ಹೆಚ್ಚಳ ಮುಂತಾದ ಫ್ಯಾಕ್ಟರಿ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದು ಸರಿಯಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ನಾಲ್ಕು ಕಾಯ್ದೆಗಳ ಜಾರಿಗೆ ಕೇಂದ್ರ ಸರಕಾರ ಮುಂದಾಗಿರುವುದು ಖಂಡನೀಯ. ಅಲ್ಲದೆ, ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸುವುದು, ಗುತ್ತಿಗೆ ಪದ್ಧತಿಯನ್ನು ವ್ಯಾಪಕಗೊಳಿಸುವುದು, ಮಹಿಳೆಯರನ್ನು ರಾತ್ರಿ ಪಾಳಿಗಳಲ್ಲಿ ಕೆಲಸಕ್ಕೆ ತೊಡಗಿಸುವುದು ಸೇರಿ ವಿವಿಧ ಕಾರ್ಮಿಕ ನೀತಿಗಳನ್ನು ವಾಪಸ್ ಪಡೆಯಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವೂ ಕೇಂದ್ರದ ಬಿಜೆಪಿ ಸರಕಾರದ ದಾರಿಯಲ್ಲೇ ಸಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಬಂಡವಾಳದಾರರ ಹಿತಾಸಕ್ತಿಯಂತೆ ಬದಲಾವಣೆ ಮಾಡುತ್ತಿದೆ.ಇನ್ನೂ, ಗುತ್ತಿಗೆ ಪದ್ಧತಿ ಕೊನೆಗೊಳಿಸಬೇಕು, ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಕನಿಷ್ಠ ವೇತನವನ್ನು 26 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸರಕಾರದ ಪ್ರತಿನಿಧಿ ಇಲ್ಲವೆಂದು ಆಕ್ರೋಶ:
‘ದೇಶವ್ಯಾಪಿ ಮುಷ್ಕರದ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾವಿರಾರರು ಕಾರ್ಮಿಕರು ಕಿಕ್ಕಿರಿದು ಸೇರಿದ್ದರು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಥವಾ ರಾಜ್ಯ ಸರಕಾರದ ಪ್ರತಿನಿಧಿ ಇಲ್ಲಿಗೆ ಆಗಮಿಸಿ ತಮ್ಮ ಅಹವಾಲು ಆಲಿಸುತ್ತಾರೆಂದು ನಿರೀಕ್ಷಿಸಿದ್ದರು. ಆದರೆ, ಯಾರೂ ಇತ್ತ ಸುಳಿಯಲಿಲ್ಲ’ ಎಂದು ಕಾರ್ಮಿಕರು ತೀವ್ರ ಬೇಸರ ವ್ಯಕ್ತಪಡಿಸಿದರು.
ಬಂದ್ ಏಕೆ?:
‘ಕೇಂದ್ರ ಸರಕಾರವು ಹಳೆಯ ಕಾರ್ಮಿಕ ಕಾನೂನುಗಳನ್ನು ಸುಧಾರಿಸುವ ಮತ್ತು ಸುಲಭಗೊಳಿಸುವ ಉದ್ದೇಶದಿಂದ, ವಾಸ್ತವದಲ್ಲಿದ್ದ ಸುಮಾರು 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ ನಾಲ್ಕು ಪ್ರಮುಖ ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆದೆಗಳು 2019 ಮತ್ತು 2020ರಲ್ಲಿ ಸಂಸತ್ತಿನಲ್ಲಿ ಮಂಜೂರಾತಿ ಪಡೆದಿದ್ದರೂ, ಅವುಗಳ ಜಾರಿಗೊಳಿಸುವಿಕೆಗೆ ರಾಜ್ಯ ಸರಕಾರಗಳ ಒಪ್ಪಿಗೆ ಮತ್ತು ನಿಯಮಗಳ ಅಧಿಸೂಚನೆ ಬಾಕಿ ಇರುವುದರಿಂದ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಇವುಗಳ ವಿರುದ್ಧ ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಭಾರತ್ ಬಂದ್ ಮುಷ್ಕರ ನಡೆಸಿವೆ.