×
Ad

ದೇಶದಲ್ಲಿ ಸ್ಥೂಲ ಕಾಯ ಸಮಸ್ಯೆಯಲ್ಲಿ ತೀವ್ರ ಏರಿಕೆ: ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಕಳವಳ

Update: 2025-06-08 07:18 IST

ಬೆಂಗಳೂರು: ಆರೋಗ್ಯಕರ ಸಮಾಜವು ಬಲವಾದ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜೆ.ಪಿ. ನಡ್ಡಾ ಅಭಿಪ್ರಾಯಪಟ್ಟರು.

ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಶನಿವಾರ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನದ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ತೈಲದಲ್ಲಿ ಕರಿದ ಆಹಾರಗಳ ಸೇವನೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಲು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯನ್ನು ನೆನಪಿಸಿಕೊಂಡ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ, ಜನರು ತಮ್ಮ ಕ್ಯಾಲೋರಿ ಸೇವನೆಯ ಪ್ರಮಾಣವನ್ನು ಮೇಲ್ವಿಚಾರಣೆ ಮಾಡಬೇಕು. ಸಮತೋಲಿತ ಆಹಾರ ಸೇವನೆಯ ಪದ್ಧತಿಯನ್ನು ಕಾಪಾಡಿಕೊಳ್ಳಬೇಕು ಎಂದು ಜೆ ಪಿ ನಡ್ಡಾ ಆಗ್ರಹಿಸಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಅವರು, 2008 ಮತ್ತು 2020ರ ನಡುವೆ ಭಾರತದಲ್ಲಿ ಬೊಜ್ಜು ಪ್ರಮಾಣವು ನಗರ ಪ್ರದೇಶಗಳಲ್ಲಿ 39.6% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 23.1%ಕ್ಕೆ ಏರಿದೆ ಎಂಬುದನ್ನು ಬಹಿರಂಗಪಡಿಸಿದೆ. ಈಗಲೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, 2050ರ ವೇಳೆಗೆ ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಬೊಜ್ಜು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಸಚಿವರು ಎಚ್ಚರಿಸಿದರು.

ಎನ್‌ಸಿಇಆರ್‌ಟಿ ಶಾಲಾ ಪಠ್ಯಕ್ರಮದಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಒಂದು ವಿಷಯವಾಗಿ ಸೇರಿಸಿದೆ ಎಂದೂ ಅವರು ಮಾಹಿತಿ ನೀಡಿದರು.

ಜಾಗೃತಿ ಅಭಿಯಾನದ ಭಾಗವಾಗಿ, ಸಚಿವರು 'ಈಟ್ ರೈಟ್ ಆಕ್ಟಿವಿಟಿ' ಪುಸ್ತಕವನ್ನು ಬಿಡುಗಡೆ ಮಾಡಿದರು.ಈ ಪುಸ್ತಕವನ್ನು ಶಿಕ್ಷಣ ಇಲಾಖೆಯ ಮೂಲಕ ಶಾಲಾ ಮಕ್ಕಳಿಗೆ ಮತ್ತು ರೈಲ್ವೆ ಮಂಡಳಿಯಿಂದ ಪ್ರಯಾಣಿಕರಿಗೆ ವಿತರಿಸಲಾಗುವುದು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಎಫ್‌ಎಸ್‌ಎಸ್‌ಎಐ ಅಭಿವೃದ್ಧಿಪಡಿಸಿದ ಶಾಲೆಗಳು, ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಕ್ಕರೆ ಮತ್ತು ತೈಲ ಬೋರ್ಡ್ ಗಳ ವ್ಯಾಪಕ ಪ್ರಚಾರವನ್ನು ಜೆ ಪಿ ನಡ್ಡಾ ಶ್ಲಾಘಿಸಿದರು.

ಈ ಕ್ರಮವು ದೈನಂದಿನ ಆಹಾರ ಪದಾರ್ಥಗಳಲ್ಲಿ ಅಡಗಿರುವ ಸಕ್ಕರೆ ಮತ್ತು ಕೊಬ್ಬಿನ ಬಗ್ಗೆ ಸ್ಪಷ್ಟ, ಸಂಬಂಧಿತ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್, ರೈಲ್ವೇ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್, ಎಫ್‌ಎಸ್‌ಎಸ್‌ಎಐ ಕಾರ್ಯನಿರ್ವಾಹಕ ನಿರ್ದೇಶಕ ಯು.ಎಸ್. ಧ್ಯಾನಿ, ದಕ್ಷಿಣ ವಲಯ ನಿರ್ದೇಶಕ ವಿ.ಕೆ. ಪಂಚಮ್ ಅವರು ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News