ನಟಿ ರಮ್ಯಾ ಗೆ ಅಶ್ಲೀಲ ಸಂದೇಶ: ಗೃಹ ಸಚಿವರು ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು: ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಅವರು ದೂರು ನೀಡಿರುವ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಂತಹ ಘಟನೆಗಳು ಮುಂದೆ ಆಗಬಾರದು ಎಂದರು.
ಇವತ್ತು ರಮ್ಯಾ ಅವರಿಗೆ ಆಗಿರಬಹುದು, ನಾಳೆ ಬೇರೆಯವರಿಗೂ ಆಗಬಹುದು. ಇದಕ್ಕೆ ಕಡಿವಾಣ ಹಾಕಬೇಕಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡುತ್ತಾರೆ. ನಾನು ಸಹ ಕಮಿಷನರ್ಗೆ ಸೂಚನೆ ಕೊಡುತ್ತೇನೆ. ಇಂತದ್ದೆಲ್ಲ ನಡೆಯಬಾರದು ಎಂದರು.
ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ವಿರುದ್ದ ನಡೆದ ಅಶ್ಲೀಲ ಹಾಗೂ ಮಹಿಳಾ ವಿರೋಧಿ ಸಾಮಾಜಿಕ ಜಾಲತಾಣ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಫಿಲಂ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಈಕ್ವಾಲಿಟಿ (ಫೈರ್) ಪತ್ರ ಬರೆದಿತ್ತು.
ಸಾಮಾಜಿಕ ಜಾಲತಾಣದಲ್ಲಿ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಟಿ ರಮ್ಯಾ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದರು.