ಅ. 21: ಪೊಲೀಸ್ ಸಂಸ್ಮರಣಾ ದಿನಾಚರಣೆ ; ಕರ್ತವ್ಯ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಧಿಕಾರಿ, ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಿರುವ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅ. 20: ರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಾಗ, ರಾಷ್ಟ್ರ ರಕ್ಷಣೆ ಮಾಡುವಾಗ ಮತ್ತು ಇತರೆ ಕರ್ತವ್ಯ ನಿರತ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಗೌರವ ಪೂರ್ವಕ ಸ್ಮರಿಸುವ ಸಲುವಾಗಿ ರಾಷ್ಟ್ರಾದ್ಯಂತ ಪ್ರತಿ ವರ್ಷ ಅ.21ರಂದು ಪೊಲೀಸ್ ಸಂಸ್ಮರಣಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
1959 ನೇ ಅಕ್ಟೋಬರ್ 21 ರಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಎಸ್. ಐ. ಕರಂ ಸಿಂಗ್ ನೇತೃತ್ವದ 20 ಜನರ ತಂಡ ಭಾರತ ಮತ್ತು ಚೈನಾ ದೇಶದ ಗಡಿ ಪ್ರದೇಶದ ಲಡಾಕ್ ಹಾಟ್‌ಸ್ಟಿಂಗ್ ಎಂಬ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವಾಗ ನೆರೆಯ ಜೈನಾ ದೇಶದ ಸೈನಿಕರು ಹಠಾತ್ತನೆ ಆಕ್ರಮಣ ಮಾಡಿ ಕರಂಸಿಂಗ್ ಮತ್ತು ಇತರೆ 09 ಸಿಬ್ಬಂದಿಯನ್ನು ಹತ್ಯೆ ಮಾಡಿದ್ದು, ಹುತಾತ್ಮರ ದೇಹಗಳನ್ನು 1959 ನೇ ಅಕ್ಟೋಬರ್ 28 ರಂದು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಗಿರುತ್ತದೆ.
ಈ ದಾರುಣ ಘಟನೆಯಲ್ಲಿ ಪ್ರಾಣ ತ್ಯಾಗ ಮಾಡಿದವರ ನೆನಪಿನಲ್ಲಿ ಈ ದಿನ ರಾಷ್ಟ್ರದಲ್ಲಿ ಮೃತರ ಗೌರವಾರ್ಥ ಪೊಲೀಸ್ ಸಂಸ್ಮರಣಾ ದಿನಾಚರಣೆ ಆಚರಿಸಲಾಗುತ್ತಿದೆ.
ಈ ಪರಂಪರೆಯಂತೆ 2025 ನೇ ಅಕ್ಟೋಬರ್ 21 ರಂದು ಬೆಳಿಗ್ಗೆ 8-00 ಗಂಟೆಗೆ ಬೆಂಗಳೂರಿನ ಮೈಸೂರು ರಸ್ತೆ ಸಿ.ಎ.ಆರ್ ಕೇಂದ್ರ ಸ್ಥಾನದಲ್ಲಿ ಪೊಲೀಸ್ ಸಂಸ್ಕರಣ ದಿನಾಚರಣೆ ಯನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹುತಾತ್ಮರಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಹುತಾತ್ಮರರಿಗೆ ಗೌರವ ನಮನಗಳನ್ನು ಸಲ್ಲಿಸಲಿರುವರು.
ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ರಾಜ್ಯದ ಪೊಲೀಸ್ ಮುಖ್ಯಸ್ಥರು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯವರು ಸೇರಿದಂತೆ ವಿವಿಧ ದರ್ಜೆಯ ಕಾರ್ಯನಿರತ ಅಧಿಕಾರಿಗಳು, ಬೆಂಗಳೂರು ನಗರದಲ್ಲಿನ ಕೇಂದ್ರ ಪೊಲೀಸ್ ಘಟಕಗಳ ಮುಖ್ಯಸ್ಥರು ಗೌರವವನ್ನು ಸಮರ್ಪಿಸಲಿದ್ದಾರೆ
2024 ನೇ ಸೆಪ್ಟೆಂಬರ್ 02 ರಿಂದ 2025ನೇ ಆಗಸ್ಟ್ 31 ರ ನಡುವಿನ ಅವಧಿಯಲ್ಲಿ ಭಾರತಾದ್ಯಂತ ಒಟ್ಟು 191 ವಿವಿಧ ದರ್ಜೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಣೆಯ ಅವಧಿಯಲ್ಲಿ ಮೃತಪಟ್ಟಿದ್ದು, ಕರ್ನಾಟಕ ರಾಜ್ಯದಲ್ಲಿ ಒಟ್ಟು 08 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಣೆಯ ಅವಧಿಯಲ್ಲಿ ಮೃತಪಟ್ಟಿರುತ್ತಾರೆ.
ಬೆಂಗಳೂರು ನಗರ ತಲಘಟ್ಟಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಮೆಹಬೂಬ್ ಗುಡ್ಡಲಿಲ್ ಕೆಜಿಎಫ್ ನ ಬಿಇಎಂಎಲ್ ನಗರ ಪೊಲೀಸ್ ಠಾಣೆಯ ಎ.ಎಸ್.ಐ ವೆಂಕಟಾಚಲಪತಿ ತುಮಕೂರು ಜಿಲ್ಲೆಯ ಡಿ.ಎ.ಆರ್. ನ ಎ.ಆರ್.ಎಸ್.ಐ ಗಿರೀಶ್.ಎಸ್ ಬೆಂಗಳೂರು ಜಿಲ್ಲೆಯ ದಾಬಸ್‌ಪೇಟೆ ಪೊಲೀಸ್ ಠಾಣೆಯ ಸಿ.ಹೆಚ್.ಸಿ ಬಸವರಾಜ ಎಂ, ತುಮಕೂರು ಜಿಲ್ಲೆಯ ಡಿಎಆರ್ ನ ಎ.ಹೆಚ್.ಸಿ ನಿಂಗರಾಜ್ ಟಿ.ಎಸ್, ಹಾಸನ ಕೆ.ಎಸ್.ಆರ್.ಪಿ. 11 ನೇ ಪಡೆಯ ಸ್ಪೆ ಆರ್.ಹೆಚ್.ಸಿ ಪ್ರಕಾಶ್.ಬಿ.ಯು, ಬೆಂಗಳೂರು ನಗರ ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆಯ ಹೆಚ್.ಸಿ. ಮಹೇಶ್.ಎನ್.ಆರ್ ಮತ್ತು ದಾವಣಗೆರೆ ಜಿಲ್ಲೆಯ ಡಿಎಆರ್ ನ ಎ.ಪಿ.ಸಿ ರಾಮಪ್ಪ ಪೂಜಾರಿ ಕಳೆದ ಒಂದು ವರ್ಷದಲ್ಲಿ ಕರ್ತವ್ಯದಲ್ಲಿದ್ದಾಗ ದಾರುಣ ಘಟನೆಗಳಲ್ಲಿ ಮೃತರಾಗಿರುತ್ತಾರೆ. ಎಲ್ಲಾ ಮೃತರ ಗೌರವಾರ್ಥ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಗೌರವ ನಮನಗಳನ್ನು ಸಲ್ಲಿಸಲಿರುವರು.