ಬೆಂಗಳೂರು : ಕೊಪ್ಪಳದ ಕುಕನೂರಿನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಇಸ್ಲಾಂ ಧರ್ಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗಳನ್ನು ಕಟುವಾಗಿ ಟೀಕಿಸಿರುವ ವಿಪಕ್ಷ ನಾಯಕ ಆರ್.‌ ಅಶೋಕ್‌ ಅವರು ʼಸಿಎಂ ಡಿಕೆಶಿ ಅವರ 6ನೇ ಗ್ಯಾರಂಟಿ - ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ’! ಎಂದು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿಎಂ ಡಿಕೆ ಶಿವಕುಮಾರ್ ಅವರೇ, ಹಿಂದೂಗಳ ಮತ ಬೇಕಾದಾಗ ದೇವಸ್ಥಾನ ಸುತ್ತುವ ನಾಟಕ ಆಡುವ ನಿಮಗೆ, ಅಧಿಕಾರ ಸಿಕ್ಕ ಮೇಲೆ ನಿಮ್ಮದೇ ಸಂಪುಟದ ಸಚಿವರು ಅದೇ ಹಿಂದೂ ಧರ್ಮವನ್ನು ಅವಹೇಳನ ಮಾಡಿದಾಗ ಮೌನ ವಹಿಸುವುದೇಕೆ? ಎಂದು ಪ್ರಶ್ನಿಸಿದ್ದಾರೆ.

"ನಿಮ್ಮ ಸಂಪುಟದ ಸಚಿವ ಬಸವರಾಜ ರಾಯರೆಡ್ಡಿ ಅವರು ʼಇಸ್ಲಾಂ ಧರ್ಮವೇ ಶ್ರೇಷ್ಠ, ನಾನು ಮಠಕ್ಕೆ ಹೋಗುವುದಿಲ್ಲʼ ಎಂದು ಬಹಿರಂಗವಾಗಿ ನೀಡಿರುವ ಹೇಳಿಕೆ ಇಡೀ ರಾಜ್ಯಾದ್ಯಂತ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಧರ್ಮದ ಬಗ್ಗೆ ಯಾರಿಗಾದರೂ ಅವರವರ ವೈಯಕ್ತಿಕ ನಂಬಿಕೆ ಇರಬಹುದು. ಆದರೆ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದುಕೊಂಡು ಕೋಟ್ಯಂತರ ಹಿಂದೂಗಳ ಆರಾಧನೆ, ಪವಿತ್ರ ಮಠ-ಮಾನ್ಯಗಳು ಮತ್ತು ಸನಾತನ ಪರಂಪರೆಯ ಬಗ್ಗೆ ಹಗುರವಾಗಿ ಮಾತನಾಡುವುದು ಅಹಂಕಾರ ಮತ್ತು ಹಿಂದೂ ಧರ್ಮದ ಮೇಲಿನ ಬಹಿರಂಗ ದಾಳಿ, ಹಿಂದೂಗಳ ಶ್ರದ್ಧೆ, ನಂಬಿಕೆಗಳಿಗೆ ಮಾಡಿರುವ ಘೋರ ಅಪಮಾನ. ಕರ್ನಾಟಕದ ಕೋಟ್ಯಾಂತರ ಹಿಂದೂಗಳಿಗೆ ರಾಯರೆಡ್ಡಿ ಅವರ ಅವಹೇನಕಾರಿ ಹೇಳಿಕೆಗಿಂತಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜಾಣ ಮೌನವೇ ಹೆಚ್ಚಿನ ಆಕ್ರೋಶ ತರಿಸುತ್ತಿದೆ" ಎಂದಿದ್ದಾರೆ.

ನಿಮ್ಮ ಈ ಮೌನವೇ ರಾಜ್ಯಕ್ಕೆ ಒಂದು ಸ್ಪಷ್ಟ ಸಂದೇಶ ನೀಡುತ್ತಿದೆ: “ಹಿಂದೂಗಳ ಭಾವನೆ ನಜ್ಜುಗುಜ್ಜಾದರೂ ಚಿಂತೆಯಿಲ್ಲ, ಓಲೈಕೆ ರಾಜಕಾರಣಕ್ಕಾಗಿ ಸಚಿವರನ್ನು ಮಾತ್ರ ರಕ್ಷಿಸಬೇಕು!”ಇದೇ ಕಾಂಗ್ರೆಸ್‌ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಅಸಲಿ ಮುಖವಲ್ಲವೇ?. ಸಿಎಂ ಡಿಕೆ ಶಿವಕುಮಾರ್ ಅವರೇ , ಈಗ ನಿಮಗಿದು ಅಗ್ನಿಪರೀಕ್ಷೆ! ರಾಯರೆಡ್ಡಿ ಅವರ ಈ ಹಿಂದೂ ವಿರೋಧಿ ಅವಹೇಳನಕಾರಿ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿ. ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಮಾಡಿರುವ ಅವರಿಂದ ತಕ್ಷಣವೇ ಸಾರ್ವಜನಿಕ ಕ್ಷಮೆಯಾಚನೆ ಮಾಡಿಸಿ. ಅವರು ಅದಕ್ಕೆ ಸಿದ್ಧರಿಲ್ಲದಿದ್ದರೆ, ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ ಎಂದು ಒತ್ತಾಯಿರುವ ಅಶೋಕ್ ಅವರು, ಇವೆರಡನ್ನೂ ಮಾಡದಿದ್ದರೆ ರಾಜ್ಯದ ಕೋಟ್ಯಾಂತರ ಹಿಂದೂಗಳ ಈ ಪ್ರಶ್ನೆಗಳಿಗೆ ನಿಮ್ಮ ಮೌನವೇ ಉತ್ತರವಾಗಲಿದೆ ಎಂದಿದ್ದಾರೆ.

“ಸನಾತನ ಧರ್ಮವನ್ನು ನಿಂದಿಸಿದ್ದು ರಾಯರೆಡ್ಡಿ ಅವರ ವೈಯಕ್ತಿಕ ಅಭಿಪ್ರಾಯವೋ? ಅಥವಾ ಇದು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮ್ಮತಿ ಪಡೆದ ಹಿಡನ್ ಅಜೆಂಡಾನೋ?” ಹಿಂದೂಗಳ ಮತಗಳನ್ನು ಪಡೆದು ಅಧಿಕಾರಕ್ಕೇರಿ, ಅದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ದಿನನಿತ್ಯ ತುಚ್ಛವಾಗಿ ನಿಂದಿಸುವ ಈ ನೀಚ ರಾಜಕಾರಣವನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ. ಹಿಂದೂ ಧರ್ಮ ಮತ್ತು ಮಠ-ಮಾನ್ಯಗಳ ಮೇಲೆ ದಾಳಿಯಾದಾಗ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತುಕೊಳ್ಳುವ ಮುಖ್ಯಮಂತ್ರಿ ಡಿಕೆಶಿ ಅವರು ಈ ಧಾರ್ಮಿಕ ನಿಂದನೆಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ರಾಯರೆಡ್ಡಿ ಅವರು ತಕ್ಷಣ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲವೇ ಸಂಪುಟದಿಂದ ಹೊರನಡೆಯಬೇಕು ಎಂದು ಆಗ್ರಹಿಸಿರುವ ಅಶೋಕ್ ಅವರು, ʼಡಿ.ಕೆ. ಶಿವಕುಮಾರ್ ಅವರೇ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆ ದೊಡ್ಡದೋ ಅಥವಾ ನಿಮ್ಮ ಸಚಿವರ ಕುರ್ಚಿ ಮತ್ತು ಮತಬ್ಯಾಂಕ್ ದೊಡ್ಡದೋ? ಕರ್ನಾಟಕ ನೋಡುತ್ತಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor